ಸಾರಾಂಶ
ರಾಯಚೂರು : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಸಮೀಪದ ತುಂಗಭದ್ರಾ ನದಿ ನಡುಗಡ್ಡೆ ನವವೃಂದಾನ ಗಡ್ಡೆಗೆ ಸಂಬಂಧಿಸಿದಂತೆ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಹಾಗೂ ಉತ್ತರಾದಿ ಮಠಗಳ ನಡುವಿನ ವಿವಾದದ ಪ್ರಕರಣದಲ್ಲಿ ಶ್ರೀರಾಯರ ಮಠದ ಎರಡನೇ ಮೇಲ್ಮನವಿಯನ್ನು ಪುರಸ್ಕರಿಸಿ, ಉತ್ತರಾದಿ ಮಠದವರು ಹೂಡಿದ್ದ ದಾವೆ ವಜಾ ಮಾಡಿದ ಗಂಗಾವತಿ ನ್ಯಾಯಾಲಯದ ಆದೇಶವನ್ನು ಧಾರವಾಡದ ಹೈಕೋರ್ಟ್ ಎತ್ತಿ ಹಿಡಿದಿದೆ.
ನವಬೃಂದಾನ ಜಾಗ ಉತ್ತರಾದಿ ಮಠಕ್ಕೆ ಸಂಬಂಧಿಸಿದ್ದಾಗಿದ್ದು, ಹಲವಾರು ವರ್ಷಗಳಿಂದ ನಮ್ಮ ಮಠದಿಂದಲೇ ಇಲ್ಲಿ ಪೂಜೆ, ಆರಾಧನಾ ಮಹೋತ್ಸವ ನಡೆಸುತ್ತಾ ಬರಲಾಗಿದೆ. ಅದ್ದರಿಂದ ಜಾಗದ ಪ್ರವೇಶವನ್ನು ತಡೆದು ರಾಯರಮಠಕ್ಕೆ ನಿರ್ಬಂಧಿಸಿ ನಿರ್ಬಂಧ ಕಾಜ್ಞೆ (ಪರ್ಮನೆಂಟ್ ಇಜಕ್ಷನ್) ನೀಡಬೇಕು ಎಂದು ಉತ್ತರಾಧಿಮಠ ಹೂಡಿದ್ದ ದಾವೆಯನ್ನು ಹೈಕೋರ್ಟ್ ವಜಾಗೊಳಿಸಿ ಶ್ರಿರಾಘವೇಂದ್ರ ಸ್ವಾಮಿಗಳ ಮಠದ ಪರವಾಗಿ ಆದೇಶ ಹೊರಡಿಸಿದೆ.
ಆದೇಶದಲ್ಲಿ ಕೇವಲ ಉತ್ತರಾದಿ ಮಠಕ್ಕೆ ಮಾತ್ರ ಪೂಜೆ ಮಾಡುವ ಹಕ್ಕು ಇದೆ ಎಂದು ಟ್ರಯಲ್ ಕೋರ್ಟ್ ಗಳು ಹೇಳಿಲ್ಲವೆಂದು ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠ ಪೂಜೆ ಮತ್ತು ಆರಾಧನೆಗಳನ್ನು ಮಾಡುವುದರಿಂದ ನಿರ್ಬಂಧಿಸುವುದು ಸಮ್ಮತವಲ್ಲವೆಂದು, ಕೆಎಟಿ ಮತ್ತು ಈ ಹಿಂದಿನ ಪ್ರಕರಣಗಳಲ್ಲಿ ಆದೇಶಗಳು ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಬಂಧನಕಾರಿ ಅಲ್ಲವೆಂದು ತಿಳಿಸಿದೆ.
14 ಎಕರೆ 7 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಮೇಲೆ ಹಕ್ಕು ಸಾಧಿಸಲು ಬರುವುದಿಲ್ಲವೆಂದೂ, ಬೃಂದಾವನಗಳು 14 ಎಕರೆ 7 ಗುಂಟೆ ಜಮೀನು ಹೊರಗೆ ಇರುವುದು ಮತ್ತು ಡಿಕ್ಲರೇಷನ್ ಪ್ರಕರಣ ದಾಖಲಿಸುವ ಬದಲು ಕೇವಲ ಇಜೆಕ್ಷನ್ ಪ್ರಕರಣ ದಾಖಲಿಸಿರುವುದು ಸರಿಯಲ್ಲವೆಂದು ಮತ್ತು ಇತರ ಕಾರಣಗಳಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದವರ ಅರ್ಜಿ ಪುರಸ್ಕರಿಸಿ ಉತ್ತರಾದಿ ಮಠದವರು ಹೂಡಿದ್ದ ನಿರ್ಬಂಧಕಾಜ್ಞೆ ದಾವೆಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಕಳೆದ 32 ವರ್ಷಗಳಿಂದಲೂ ವ್ಯಾಜ್ಯವನ್ನು ಹೈಕೋರ್ಟ್ ಇತ್ಯಾರ್ಥಪಡಿಸಿ ಶ್ರೀರಾಘವೇಂದ್ರ ಮಠದ ಪರವಾಗಿ ತೀರ್ಪು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಯರ ಮಠದ ಪರವಾಗಿ ಹಿರಿಯ ನ್ಯಾಯವಾದಿಗಳಾದ ಸಿ.ವಿ. ನಾಗೇಶ, ಪ್ರಭುಲಿಂಗ ನಾವದಗಿ ಅವರು ವಾದಮಂಡಿಸಿದ್ದರು. ಇನ್ನು ಮೂರು ದಶಕಗಳ ಕಾನೂನು ಹೋರಾಟದಲ್ಲಿ ರಾಯರ ಮಠದ ಪರವಾಗಿ ಹಿರಿಯ ನ್ಯಾಯವಾದಿಗಳಾದ ಕೆ.ಸುಮನ್, ಡಿ.ಸುರೇಶ್ ವಕೀಲರು, ಚಂದ್ರನಾಭ ಅರಿಗ, ಭೂಸನೂರ್ ಮಠ, ಶ್ರೀಡಣಾಪುರ ಶ್ರೀನಿವಾಸ್, ಫಣಿರಾಜ ಕಶ್ಯಪ, ಶ್ರೀನವಲಿ ಪ್ರಹ್ಲಾದ ರಾವ್, ಶ್ರೀರಾಘವೇಂದ್ರರಾವ್ ಕುಲಕರ್ಣಿ ಮತ್ತು ಶ್ರೀ ರಾಮಮೂರ್ತಿ ಕರಣಂ ಮುಂತಾದವರು ವಾದಮಂಡಿಸಿದ್ದರು ಎಂದು ಶ್ರೀರಾಯರ ಮಠದ ಜಿಪಿಎ ಹೋಲ್ಡರ್ ಶ್ರೀರಾಜಾ ವಾದಿಂದ್ರ ಆಚಾರ್ ತಿಳಿಸಿದ್ದಾರೆ.