ರಾಜ್ಯದಲ್ಲಿನ ಕರ್ನಾಟಕ ಲೋಕಸೇವಾ ಆಯೋಗವನ್ನು ತೊಲಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಹೊಸಪೇಟೆ: ರಾಜ್ಯದಲ್ಲಿನ ಕರ್ನಾಟಕ ಲೋಕಸೇವಾ ಆಯೋಗವನ್ನು ತೊಲಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸ್ಥಳೀಯ ತಹಸೀಲ್ದಾರರ ಕಚೇರಿ ಎದುರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಕೆ.ಆರ್.ಎಸ್. ಪಕ್ಷದ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವರುಣ್ ತೋರಣಗಟ್ಟೆ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದಕ್ಕೆ ನೇರ ಕಾರಣ ನೇಮಕಾತಿಗಳಲ್ಲಿ ಹಾಗೂ ವರ್ಗಾವಣೆಯಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಭ್ರಷ್ಟಾಚಾರವಾಗಿದೆ. ಕಳೆದ ಮೂರು ದಶಕಗಳಿಂದ ಬಹುತೇಕವಾಗಿ ರಾಜ್ಯದಲ್ಲಿ ನಡೆದಿರುವ ಎಲ್ಲ ನೇಮಕಾತಿಗಳು ಭ್ರಷ್ಟಾಚಾರದಿಂದ ಕೂಡಿದ್ದು, ಅರ್ಹರು ಮತ್ತು ಬಡವರು ಸರ್ಕಾರಿ ಉದ್ಯೋಗಳಿಂದ ವಂಚಿತರಾಗಿದ್ದಾರೆ ಎಂದರು.

ಅಕ್ರಮವಾಗಿ ಮತ್ತು ಹತ್ತಾರು ಲಕ್ಷ ಲಂಚ ನೀಡಿ ಸರ್ಕಾರಿ ಉದ್ಯೋಗ ಪಡೆದವರು ಭ್ರಷ್ಟಾಚಾರವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಲೋಪದೋಷಗಳನ್ನು ಸರಿಪಡಿಸಲು ಮುಂಬರುವ ದಿನಗಳಲ್ಲಿ ನಾಡಿನ ಜನತೆ ಕೆ.ಆರ್.ಎಸ್. ಪಕ್ಷಕ್ಕೆ ಅಧಿಕಾರ ನೀಡಬೇಕು ಎಂದು ಹೇಳಿದರು.

ಪಕ್ಷದ ರಾಜ್ಯ ಎಸ್.ಸಿ. ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಪ.ಯ. ಗಣೇಶ ಮಾತನಾಡಿ, ಕೆ.ಪಿ.ಎಸ್.ಸಿ. ನಡೆಸುತ್ತಿರುವ ಹಗಲು ದರೋಡೆಯ ಕಾರಣಕ್ಕೆ ಅತ್ಯಂತ ತೀವ್ರವಾಗಿ ಸಂತ್ರಸ್ತರಾಗುತ್ತಿರುವವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರು. ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ದಲಿತರೇ ಹೆಚ್ಚು ಬಡವರಿದ್ದಾರೆ. ಅವರ ಆರ್ಥಿಕ ಮತ್ತು ಸಾಮಾಜಿಕ ಬದುಕನ್ನು ಘನತೆಯಿಂದ ತುಂಬಲು ಸರ್ಕಾರಿ ಹುದ್ದೆಗಳು ಅತ್ಯಂತ ಅವಶ್ಯ. ಆದರೆ, ಜೆಸಿಬಿ ಎಂದು ಗುರುತಿಸಲಾಗುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಂಯುಕ್ತವಾಗಿ ಭ್ರಷ್ಟಾಚಾರವನ್ನು ಅತ್ಯಂತ ನೈಪುಣ್ಯತೆಯಿಂದ ಕಾಪಾಡಿಕೊಂಡು ಬಂದ ಕಾರಣಕ್ಕೆ ದಲಿತರು ಇಂದಿಗೂ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಿಂದ ದೂರವಿದ್ದಾರೆ ಎಂದರು.

ಜಿಲ್ಲಾ ಕಾರ್ಯದರ್ಶಿ ಹರಕುಣಿ ಗಣೇಶ ಮಾತನಾಡಿ, 1998ರ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಯಿಂದ ಆರಂಭಗೊಂಡ ಅಕ್ರಮಗಳ ಸರಮಾಲೆ, ಇಲ್ಲಿ ವರೆಗೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಪ್ರತಿಯೊಂದು ನೇಮಕಾತಿ ಹಗರಣದ ಬಗ್ಗೆ ತನಿಖೆಯಾದರೂ ಇಲ್ಲಿಯವರೆಗೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಬಹುತೇಕ ಭ್ರಷ್ಟರೇ ತುಂಬಿರುವ ಮತ್ತು ಭ್ರಷ್ಟರನ್ನು ಉತ್ಪಾದಿಸುವ ಲೋಕಸೇವಾ ಆಯೋಗದಿಂದ ರಾಜ್ಯದ ಜನತೆಗೆ ಆಗುತ್ತಿರುವ ಉಪಯೋಗವಾದರೂ ಏನು ಎಂದು ಅವರು ಪ್ರಶ್ನಿಸಿದರು.

ನಂತರ ಮನವಿಪತ್ರವನ್ನು ಪ್ರತಿಭಟನಾಕಾರರು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕೆ.ಆರ್.ಎಸ್. ಪಕ್ಷದ ಜಿಲ್ಲಾ ಕಾರ್ಯದರ್ಶಿ ಎ.ಎಂ. ವೀರೇಂದ್ರ, ಎಸ್.ಸಿ. ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಎಚ್. ಲೋಕೇಶ, ಜಿಲ್ಲಾ ಉಪಾಧ್ಯಕ್ಷೆ ಬಿ. ವಸಂತಾ ಕುಮಾರಿ, ಓಬಳೇಶ, ಪ್ರಧಾನ ಕಾರ್ಯದರ್ಶಿ ಸೋಮಶೇಖರ ನಾಯಕ, ಜಿಲ್ಲೆಯ ವಿವಿಧ ತಾಲೂಕು ಅಧ್ಯಕ್ಷರಾದ ಶರಣಪ್ಪ, ಹಾಲೇಶ, ಗುರುಬಸವರಾಜ, ಟಿ. ನಜೀರ್, ಆನಂದ ಚಲವಾದಿ ಸೇರಿದಂತೆ ಕಾರ್ಯಕರ್ತರು ಬಾಗವಹಿಸಿದರು.