ಜನ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಲು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ

| Published : Nov 20 2025, 12:00 AM IST

ಜನ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಲು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ವೇ ಸಂತ್ರಸ್ಥ ರೈತರ ನ್ಯಾಯಯುತ ಬೇಡಿಕೆಗಳನ್ನು ಇತ್ಯರ್ಥ ಮಾಡದೆ ಕಾಲಹರಣ ಮಾಡುತ್ತಿದೆ, ಮೊದಲು ರೈತರ ಬಾಕಿ ಹಣ ಪಾವತಿಸಬೇಕು, ಈ ರಸ್ತೆಗೆ ಭೂಮಿ ನೀಡಿದ ರೈತರಿಗೆ ಪರ್ಯಾಯ ಜಮೀನು ನೀಡಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ರೈತ ಹಾಗೂ ಜನ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಒತ್ತಾಯಿಸಿದರು.

ಪಟ್ಟಣದ ಕನಕ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ೬ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ಆಡಳಿತ ನೀಡದೆ ಜನವಿರೋಧಿ ನೀತಿಯನ್ನು ಪಾಲಿಸುತ್ತಿವೆ ಎಂದು ಟೀಕಿಸಿದರು.

ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ನಂತರ ರೈತ ಪರ ಆಡಳಿತ ನೀಡದೆ ಜನ ವಿರೋಧಿ ಆಡಳಿತ ಮಾಡುತ್ತಿವೆ ಎಂದು ಆರೋಪಿಸಿದರು.

ಜನವಿರೋಧಿ ಆಡಳಿತದ ವಿರುದ್ಧ ಪ್ರಾಂತ ರೈತ ಸಂಘ ರಾಟಗಳನ್ನು ಮಾಡುತ್ತಿದೆ, ಕೇಂದ್ರ ಸರ್ಕಾರ ಜನಸಾಮಾನ್ಯರ ಪರ ಕೆಲಸ ಮಾಡದೆ ಕಾರ್ಪೋರೇಟ್ ಸಂಸ್ಥೆಗಳ ಪರ ಕೆಲಸ ಮಾಡುತ್ತಿದೆ ಎಂದರು.

ರೈತರ ಸಾಲಮನ್ನಾ ಮಾಡಲು ಸರ್ಕಾರಗಳ ಬಳಿ ಹಣವಿಲ್ಲ, ಆದರೆ ದೊಡ್ಡ ದೊಡ್ಡ ಶ್ರೀಮಂತರು ಬ್ಯಾಂಕಿನಿಂದ ಪಡೆದ ಕೋಟ್ಯಾಂತರ ಸಾಲವನ್ನು ವಸೂಲಿ ಮಾಡಲಾಗದೆ ಮನ್ನಾ ಮಾಡುತ್ತಿದೆ. ಇದೇನಾ ಸರ್ಕಾರಗಳ ನೀತಿ ಎಂದು ಖಂಡಿಸಿದರು.

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ವೇ ಸಂತ್ರಸ್ಥ ರೈತರ ನ್ಯಾಯಯುತ ಬೇಡಿಕೆಗಳನ್ನು ಇತ್ಯರ್ಥ ಮಾಡದೆ ಕಾಲಹರಣ ಮಾಡುತ್ತಿದೆ, ಮೊದಲು ರೈತರ ಬಾಕಿ ಹಣ ಪಾವತಿಸಬೇಕು, ಈ ರಸ್ತೆಗೆ ಭೂಮಿ ನೀಡಿದ ರೈತರಿಗೆ ಪರ್ಯಾಯ ಜಮೀನು ನೀಡಬೇಕು ಮತ್ತು ಈ ರಸ್ತೆಯಲ್ಲಿ ಸಂಚರಿಸಲು ಟೋಲ್ ಪಡೆಯಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರಲ್ಲದೆ ಜನಪರವಲ್ಲದ ಸರ್ಕಾರಗಳನ್ನು ಅಧಿಕಾರಕ್ಕೆ ತರುವ ಮುನ್ನ ಯೋಚಿಸಿ ಮತ ಹಾಕಬೇಕೆಂದು ಹೇಳಿದರು.

ಕೆಆರ್‌ಪಿಎಸ್ ತಾಲೂಕು ಅಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಜನರಿಂದ ಎರಡರಷ್ಟು ಹಣವನ್ನು ತೆರಿಗೆ ಮೂಲಕ ವಸೂಲಿ ಮಾಡುತ್ತಿದೆ, ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿಗೆ ಹಣವಿಲ್ಲ ಎನ್ನುವ ಇವರಿಗೆ ಬಿಟ್ಟಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಎಂದು ಯಾರಾದರೂ ಕೇಳಿದ್ದರೇ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಹಿನ್ನೆಲೆ ಅಧಿಕಾರ ಉಳಿಸಿಕೊಳ್ಳಲು ಹಗ್ಗ ಜಗ್ಗಾಟದಲ್ಲಿ ತೊಡಗಿದೆ ವಿನಃ ಜನರ ಕಷ್ಟಗಳ ಕಡೆ ಗಮನ ಹರಿಸುತ್ತಿಲ್ಲ ಎಂದು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.

ಬಗರ್ ಹುಕ್ಕುಂ ಸಾಗುವಳಿ ಸಕ್ರಮ ಮಾಡಬೇಕು, ಪಿ.ನಂಬರ್ ನಿಂದ ರೈತರಿಗೆ ಉಂಟಾಗಿರುವ ತೊಂದರೆಗಳನ್ನು ನಿವಾರಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಕೃಷಿ ರಂಗದ ಉಳಿವಿಗಾಗಿ ಮತ್ತು ರೈತರ ಕೃಷಿ ಕೂಲಿಕಾರರ ರಕ್ಷಣೆಗಾಗಿ ಮುಂದಿನ ಹೋರಾಟವನ್ನು ರೂಪಿಸಲು ಹಾಗೂ ಸಂಘಟನೆಯನ್ನು ಬಲಿಷ್ಠಗೊಳಿಸಲು ಬದ್ಧವಾಗಿದೆ ಎಂದರು.

ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್, ವನೀನ್ ಕುಮಾರ್, ಬಿ.ಎಲ್.ಕೇಶವರಾವ್, ಎ.ಪಿಚ್ಚಕಣ್ಣು, ಸಿ.ಆರ್.ಮೂರ್ತಿ, ಎಂ.ಬಾಬು, ಟಿ.ಅಪ್ಪಯ್ಯಣ್ಣ ಇತರರು ಇದ್ದರು.