ಕರ್ನಾಟಕದಲ್ಲಿ ಶೀಘ್ರ ಅಂಗವಿಕಲರ ಜನಗಣತಿ ಕಾರ್ಯ

| Published : May 10 2025, 01:08 AM IST

ಸಾರಾಂಶ

ಚಿತ್ರದುರ್ಗ ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಜಿಲ್ಲೆಯ ವಿಆರ್ ಡಬ್ಲ್ಯೂ, ಎಂಆರ್ ಡಬ್ಲ್ಯೂಗಳಿಗೆ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಕ್ರಮವನ್ನು ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಸಕ್ತ ವರ್ಷದಲ್ಲಿಯೇ ಅಂಗವಿಕಲರ ಜನಗಣತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ ಅನುಷ್ಠಾನದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.

ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಜಿಲ್ಲೆಯ ವಿಆರ್ ಡಬ್ಲ್ಯೂ, ಎಂಆರ್ ಡಬ್ಲ್ಯೂಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂಗವಿಕಲರ ಜನಗಣತಿ ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ಈ ಸಂಬಂಧ ಸುಮಾರು ಒಂಭತ್ತು ತಿಂಗಳ ಹಿಂದೆ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಗಣತಿಯಿಂದಾಗಿ ಅಂಗವಿಕಲರ ಸಬಲೀಕರಣ, ಸುಧಾರಣೆಗಾಗಿ ಅಂಗವಿಕಲರ ನಿಖರ ಮಾಹಿತಿ ಲಭ್ಯವಾಗಲಿದೆ. ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್‍ನಲ್ಲಿ ಅಂಗವಿಕಲರ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದು, ಪ್ರಸಕ್ತ ವರ್ಷದಲ್ಲಿಯೇ ಅಂಗವಿಕಲರ ಜನಗಣತಿ ಕಾರ್ಯಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಂಗವಿಕಲರ ಜನಗಣತಿ ಕಾರ್ಯ ಸಂಬಂಧ ವಿಆರ್‌ಡಬ್ಲ್ಯೂ, ಎಂ.ಆರ್.ಡಬ್ಲ್ಯೂಗಳಿಗೆ ತರಬೇತಿ ನೀಡಲಾಗುವುದು. ಎಷ್ಟು ಜನ ಅಂಗವಿಕಲರು ಯುಡಿಐಡಿ ಕಾರ್ಡ್ ಪಡೆದಿದ್ದಾರೆ, ಇನ್ನೂ ಎಷ್ಟು ಯುಡಿಐಡಿ ಕಾರ್ಡ್ ಬಾಕಿ ಇದೆ, ಅಂಗವಿಕಲರ ಮಾಸಾಶನ ಎಷ್ಟು ಜನರಿಗೆ ತಲುಪುತ್ತಿದೆ ಎಂಬುವುದು ಸೇರಿದಂತೆ ಎಲ್ಲ ಮಾಹಿತಿಯನ್ನೂ ಸಹ ಮನೆ ಮನೆಗೆ ಭೇಟಿ ನೀಡಿ ದಾಖಲಿಸಲಾಗುವುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನಿಷ್ಟ ಎರಡು ಅಂಗವಿಕಲರ ಸ್ವ-ಸಹಾಯ ಗುಂಪುಗಳನ್ನು ಶೀಘ್ರವಾಗಿ ರಚನೆ ಮಾಡಬೇಕು. ಈ ನಿಟ್ಟಿನಲ್ಲಿ ವಿಆರ್‍ಡಬ್ಲ್ಯೂಗಳು ಕಾರ್ಯಪ್ರವೃತ್ತರಾಗಬೇಕಿದೆ. ಮುಂದಿನ ದಿನಗಳಲ್ಲಿ ಸುಗಮ್ಯ ಯಾತ್ರೆ ಕೈಗೊಳ್ಳಲಾಗುತ್ತಿದ್ದು, ಅಂಗವಿಕಲರ ಸಬಲೀಕರಣಕ್ಕಾಗಿ ಉತ್ತಮ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.

ಕಾರ್ಮಿಕ ಕಾಯ್ದೆ ಅನುಸಾರ ವಿಆರ್‌ಡಬ್ಲ್ಯೂ, ಎಂಆರ್ ಡಬ್ಲ್ಯೂಗಳಿಗೆ ಕನಿಷ್ಟ ವೇತನ ನೀಡಲು ಅಗತ್ಯ ಕ್ರಮವಹಿಸಲಾಗುವುದು. ವಿಆರ್‍ ಡಬ್ಲ್ಯೂಗಳು ನಿಮ್ಮ ಪಂಚಾಯಿತಿ ವ್ಯಾಪ್ತಿಯ ಅಂಗವಿಕಲರಿಗೆ ದಾರಿದೀಪವಾಗಬೇಕು. ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿ ಅಂಗವಿಕಲರ ಪರವಾಗಿ, ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ದಾಸ್ ಸೂರ್ಯವಂಶಿ ಸಲಹೆ ನೀಡಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಗ್ರಾಮ ಪಂಚಾಯಿತಿ, ಸರ್ಕಾರಿ ಆಸ್ಪತ್ರೆ, ಗ್ರಂಥಾಲಯ, ಬ್ಯಾಂಕುಗಳು, ಪ್ರವಾಸಿ ಮಂದಿರ ಸೇರಿದಂತೆ ಸಾರ್ವಜನಿಕ ಕಟ್ಟಡಗಳು ವಿಕಲಚೇತನ ಸ್ನೇಹಿಯಾಗಿರಬೇಕು. ಎಲ್ಲ ಕಟ್ಟಡಗಳಿಗೂ ರ್ಯಾಂಪ್, ರೇಲಿಂಗ್ಸ್ ಅಳವಡಿಸಿಕೊಳ್ಳಬೇಕು. ಇವೆಲ್ಲವುಗಳನ್ನು ಎಲ್ಲಿ ಅಳವಡಿಸಿದ್ದಾರೆ, ಅಳವಡಿಸಿಲ್ಲ ಎಂಬುವುದರ ಕುರಿತು ನಿಖರ ಮಾಹಿತಿ ಸಂಗ್ರಹಿಸಿದರೆ ಮುಂದಿನ ದಿನಗಳಲ್ಲಿ ಭಾರತ ಸರ್ಕಾರದಿಂದ ಕ್ರಿಯಾ ಯೋಜನೆ ರೂಪಿಸಲು ಹಾಗೂ ಅಗತ್ಯವಿರುವ ಕಡೆ ಅನುದಾನದ ಬೇಡಿಕೆ ಸಲ್ಲಿಸಲು ಸಾಧ್ಯವಾಗುತ್ತದೆ. ಸುಗಮ್ಯ ಭಾರತ ಯಾತ್ರಾದಲ್ಲಿ ಪ್ರತಿಯೊಂದು ಸರ್ಕಾರಿ ಕಟ್ಟಡದ ಅಸೆಸೆಮೆಂಟ್ ಮಾಡಬೇಕಿದೆ. ಈ ನಿಟ್ಟಿನಲ್ಲಿ ಯೆಸ್ ಟು ಅಕ್ಸೆಸ್ ಮೊಬೈಲ್ ಆ್ಯಪ್ ಅನ್ನು ಸಹ ನೀಡಲಾಗಿದೆ. ಮುಂದಿನ ದಿನಗಲ್ಲಿ ದಿನಾಂಕ ನಿಗಧಿಪಡಿಸಿ, 15 ದಿನದೊಳಗೆ ಈ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ, ಆನ್‍ಲೈನ್‍ನಲ್ಲಿ ವರದಿ ಸಲ್ಲಿಸಬೇಕು ಎಂದರು.

ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ ಅನುಷ್ಠಾನದ ರಾಷ್ಟ್ರೀಯ ಆಯುಕ್ತ ಗೋವಿಂದರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರ ಇದ್ದರು.