ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಮಾನವನ ದೇಹದಲ್ಲಿ ಕಣ್ಣುಗಳು ಅತ್ಯಂತ ಅಮೂಲ್ಯವಾದ ಅಂಗ, ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಮಹೇಂದ್ರಸಿಂಗ್ ಕಾಳಪ್ಪ ಹೇಳಿದರು.

ತಾಲೂಕಿನ ಕರೋಹಟ್ಟಿ ಗ್ರಾಮದ ಗುರುಮಲ್ಲೇಶ್ವರ ಮಠದಲ್ಲಿ ಕಾನ್ ಸಿಂಗ್ ಜೀ ಪುರೋಹಿತ್ ಹಾಗು ಗೌರಿದೇವಿ ಸ್ಮರಣಾರ್ಥವಾಗಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ, ಬನ್ನೂರಿನ ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಣ್ಣಿನ ತಪಾಸಣೆಯ ಉಚಿತ ಶಿಬಿರದಲ್ಲಿ‌ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸಾ ಸೇವೆಯನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ಈ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ನಮ್ಮ‌ತಂದೆ-ತಾಯಿಯ ಸ್ಮರಣಾರ್ಥ ಕಳೆದ 18 ವರ್ಷಗಳಿಂದ ಯಶಸ್ವಿಯಾಗಿ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದೇನೆ ಎಂದರು.

ಕಣ್ಣಿನ ಆರೈಕೆ, ಪೌಷ್ಟಿಕ ಆಹಾರದ ಮಹತ್ವ, ಮಧುಮೇಹದಿಂದ ಉಂಟಾಗುವ ನೇತ್ರ ಸಮಸ್ಯೆ, ಮಕ್ಕಳಲ್ಲಿ ಕಂಡುಬರುವ ದೃಷ್ಟಿದೋಷ ಹಾಗೂ ಕಣ್ಣಿನ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಯಿತು. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ ಅಗತ್ಯ ಮಾರ್ಗದರ್ಶನ ನೀಡಿದರು.


ಅರವಿಂದ ಕಣ್ಣಿನ ಆಸ್ಪತ್ರೆಯ ಡಾ. ರೋಷನಿ ಫುರ್ಟಡೋ, ಡಾ. ಶಿವಾನಿ ನಮಲಾ, ಡಾ. ಕಾಜೋಲ್ ಪಾಟೀಲ್ ಅವರು ಕಣ್ಣಿನ ತಪಾಸಣೆ ನಡೆಸಿದರು.

ಈ ವೇಳೆ ಕರೋಹಟ್ಟಿ ಗ್ರಾಮಸ್ಥರು ಮಹೇಂದ್ರ ಸಿಂಗ್ ಕಾಳಪ್ಪ ಅವರನ್ನು ಸನ್ಮಾನಿಸಿದರು.

ಪ್ರೊ.ಬಿ. ವಿಜಯಕಾಂತ್, ಕೆ.ಎಂ. ಶಿವಮೂರ್ತಿ, ಆನಂದ್, ಕರೋಹಟ್ಟಿ ರಾಜಶೇಖರ, ನಂಜುಂಡಪ್ಪ, ಮೂಗೂರು ಚಂದ್ರ, ಶಂಕರ್ ನಾಗ್, ರಾಜೇಶ್, ಮಹೇಶ್, ರಮೇಶ್, ಹರ್ಷವರ್ಧನ್, ಜೀವನ್, ಬಸವರಾಜು, ಪವನ್ ಮೊದಲಾದವರು ಇದ್ದರು.

13ಕ್ಕೆ ಬನ್ನೂರಿನಲ್ಲಿ ತಪಾಸಣಾ ಶಿಬಿರ

ಜೂ. 13 ರಂದು ಎರಡನೇ ಶನಿವಾರ ಬನ್ನೂರಿನ ರೋಟರಿ ಶಾಲೆ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮಹೇಂದ್ರ ಸಿಂಗ್ ಕಾಳಪ್ಪ ಕೋರಿದ್ದಾರೆ.