ಗೋಕರ್ಣ ಕೋಟಿತೀರ್ಥದ ಪಟ್ಟೆವಿನಾಯಕ ದೇವರ ಕಾರ್ತಿಕ ದೀಪೋತ್ಸವ

| Published : Nov 21 2024, 01:05 AM IST

ಗೋಕರ್ಣ ಕೋಟಿತೀರ್ಥದ ಪಟ್ಟೆವಿನಾಯಕ ದೇವರ ಕಾರ್ತಿಕ ದೀಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ವೆಂಕಟರಮಣ ಮಂದಿರದಿಂದ ಕೋಟಿತೀರ್ಥಕ್ಕೆ ಬರುವ ಮಾರ್ಗ ಹಾಗೂ ಏಳು ಎಕರೆ ವಿಸ್ತಾರದ ಕೋಟಿತೀರ್ಥ ಕಟ್ಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಗೋಕರ್ಣ: ಕೋಟಿತೀರ್ಥ ಕಟ್ಟೆಯಲ್ಲಿರುವ ಪಟ್ಟೆವಿನಾಯಕ ಮಂದಿರದ ೫೦ನೇ ಕಾರ್ತಿಕ ದೀಪೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.

ಮುಂಜಾನೆ ವಿವಿಧ ದೈವಿಕ ಕಾರ್ಯಕ್ರಮಗಳ ಜರುಗಿ, ಸಂಜೆ ಶ್ರೀದೇವರ ಉತ್ಸವ ನಾಗಬೀದಿ ಮೂಲಕ ಮಹಾಬಲೇಶ್ವರ ಮಂದಿರಕ್ಕೆ ತೆರಳಿ ರಥಬೀದಿ ಮೂಲಕ ಮಂದಿರಕ್ಕೆ ಮರಳಿತು.

ಆನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಮಂದಿರದ ಅರ್ಚಕ ವೇ. ಚಿಂತಾಮಣ ಶಾಸ್ತ್ರಿ ಕೊಡಗಿ ಪೂಜಾ ಕೈಂಕರ್ಯ ನೆರವೇರಿಸಿದರು.

ವೆಂಕಟರಮಣ ಮಂದಿರದಿಂದ ಕೋಟಿತೀರ್ಥಕ್ಕೆ ಬರುವ ಮಾರ್ಗ ಹಾಗೂ ಏಳು ಎಕರೆ ವಿಸ್ತಾರದ ಕೋಟಿತೀರ್ಥ ಕಟ್ಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲ್ಲದೇ ಉತ್ಸವ ಬರುವ ವೇಳೆ ಕೋಟಿತೀರ್ಥ ಕಟ್ಟೆಯನ್ನು ಹಣತೆಯಿಂದ ದೀಪ ಬೆಳಗಿರುವುದು, ಸಿಡಿಮದ್ದಿನ ಅಬ್ಬರ ಬಹು ಆಕರ್ಷಕವಾಗಿತ್ತು. ವಾದ್ಯಘೋಷ, ಚಂಡೆನಾದ ಉತ್ಸವಕ್ಕೆ ಮೆರಗು ತಂದಿತ್ತು. ಉತ್ಸವಕ್ಕೆ ಬರುವ ಮಾರ್ಗದಲ್ಲಿ ರಂಗೋಲಿ ಹಾಕಿ ಮಾವಿನ ತೋರಣದಿಂದ ಶೃಂಗರಿಸಿ, ಜನರು ಆರತಿ ನೀಡಿ ವಂದಿಸಿದರು.

ರಾತ್ರಿ ಮಂದಿರದ ಆವಾರದಲ್ಲಿ ಕಿರು ಮಂಜೇಶ್ವರದ ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಸಂಯೋಜನೆಯಲ್ಲಿ ಖ್ಯಾತ ಭಾಗವತರು, ಕಲಾವಿದರಿಂದ ನಡೆದ "ಮಹಿಷ ವಧೆ " ಯಕ್ಷಗಾನ ಪ್ರದರ್ಶನ ಜನರನ್ನು ಮನರಂಜಿಸಿತು. ಪುಣ್ಯಾಶ್ರಮದ ಶ್ರೀ ರಾಜಗೋಪಾಲ ಅಡಿಗುರೂಜಿ ಅವರು ಯಕ್ಷಗಾನದ ಪ್ರಾಯೋಜಕತ್ವ ವಹಿಸಿದ್ದರು.

ಕದಂಬೇಶ್ವರ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ

ಅಂಕೋಲಾ: ಪಟ್ಟಣದ ಕುಂಬಾರಕೇರಿಯ ಪುರಾತನ ಪ್ರಸಿದ್ಧ ಕದಂಬೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ನಿಮಿತ್ತ ಸೋಮವಾರ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಸಾವಿರಾರು ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಕದಂಬೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಸೋಮವಾರ ಕದಂಬೇಶ್ವರ ಸನ್ನಿಧಾನದಲ್ಲಿ ಭಕ್ತರು ಶ್ರದ್ಧೆಯಿಂದ ದೀಪೋತ್ಸವವನ್ನು ವಿಧ್ಯುಕ್ತವಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಮಹೇಶ ಮಹಾಲೆ, ಗಣೇಶ ನಾಗ್ವೇಕರ, ಮಧು ಕುಡಾಲಕರ, ನಾಗರತ್ನ ಎಸ್.ಎಂ., ಶ್ರೀಕಾಂತ ನಾಯ್ಕ ಹಾಗೂ ಕದಂಬೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.