ರಂಭಾಪುರಿ ಶ್ರೀಗಳ ಮಂದಿರದಲ್ಲಿ ಸಡಗರದ ಕಾರ್ತಿಕೋತ್ಸವ

| Published : Nov 18 2025, 01:00 AM IST

ಸಾರಾಂಶ

ಮನುಷ್ಯನಿಗೆ ಭಗವಂತ ಅಮೂಲ್ಯ ಕೊಡುಗೆ ಕೊಟ್ಟಿದ್ದಾನೆ. ಅರಿವು ಮತ್ತು ಆದರ್ಶಗಳಿಂದ ಮನುಷ್ಯನ ಬದುಕು ಉಜ್ವಲಗೊಳ್ಳುತ್ತದೆ. ಕತ್ತಲೆ ಅಜ್ಞಾನದ ಸಂಕೇತ. ಬೆಳಕು ಜ್ಞಾನದ ಸಂಕೇತ. ಅರಿವಿನ ಬದುಕು ಶ್ರೇಯಸ್ಸಿಗೆ ಮೂಲ.

ಹುಬ್ಬಳ್ಳಿ:

ಇಲ್ಲಿನ ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದ ಆವರಣದಲ್ಲಿರುವ ಶ್ರೀಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ ಸಡಗರ, ಸಂಭ್ರಮದಿಂದ ನಡೆಯಿತು.

ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದ ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀ, ಮನುಷ್ಯನಿಗೆ ಭಗವಂತ ಅಮೂಲ್ಯ ಕೊಡುಗೆ ಕೊಟ್ಟಿದ್ದಾನೆ. ಅರಿವು ಮತ್ತು ಆದರ್ಶಗಳಿಂದ ಮನುಷ್ಯನ ಬದುಕು ಉಜ್ವಲಗೊಳ್ಳುತ್ತದೆ. ಕತ್ತಲೆ ಅಜ್ಞಾನದ ಸಂಕೇತ. ಬೆಳಕು ಜ್ಞಾನದ ಸಂಕೇತ. ಅರಿವಿನ ಬದುಕು ಶ್ರೇಯಸ್ಸಿಗೆ ಮೂಲವೆಂದರು. ದೇವರು ಎಲ್ಲರಲ್ಲಿ ಮತ್ತು ಎಲ್ಲೆಡೆಯಲ್ಲೂ ತುಂಬಿದ್ದಾನೆ. ಆದರೆ ಎಲ್ಲರೂ ದೇವರಲ್ಲಿ ಭಕ್ತಿ ಶ್ರದ್ಧೆ ಇಟ್ಟುಕೊಂಡಿಲ್ಲ. ನಿಂತ ನೆಲ, ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ, ಬೆಳಕು ಎಲ್ಲವೂ ದೇವರಿತ್ತ ಕೊಡುಗೆ. ಇಷ್ಟೆಲ್ಲ ಸಂಪನ್ಮೂಲ ಕೊಟ್ಟ ಭಗವಂತನ ಸ್ಮರಣೆ ಮತ್ತು ಪೂಜೆ ಸಲ್ಲಿಸದೇ ಹೋದರೆ ಅರಿವಿನ ಜನ್ಮ ಸಾರ್ಥಕವಾಗುವುದಿಲ್ಲ ಎಂದರು.

ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಗುರುವಿನ ಬೋಧಾಮೃತದಿಂದ ಅಜ್ಞಾನ ಸರಿದು ಜ್ಞಾನ ಪ್ರಾಪ್ತಿಯಾಗಲು ಸಾಧ್ಯ. ವೀರಶೈವ ಧರ್ಮದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಸಂರಕ್ಷಣೆಗೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ ಎಂದು ಹೇಳಿದರು.ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಗಣಗೇರಿ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ದಾನಯ್ಯ ಸ್ವಾಮಿ ಉಪಸ್ಥಿತರಿದ್ದರು. ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಇಂದುಮತಿ ಮಾನ್ವಿ, ಪ್ರಕಾಶ ಬೆಂಡಿಗೇರಿ, ಶಾಸಕ ಎಂ.ಆರ್. ಪಾಟೀಲ, ವಿಶ್ವನಾಥ ಹಿರೇಗೌಡರ ಸ್ವಾಗತಿಸಿದರು. ಆವರಣದ ಸುತ್ತಲೂ ದೀಪಗಳನ್ನು ಹಚ್ಚುವ ಮೂಲಕ ಭಕ್ತರು ಧನ್ಯತೆ ಮೆರೆದರು.