ಎಂಇಎಸ್ ವಿರುದ್ಧ ಕರುನಾಡ ವಿಜಯಸೇನೆ ಪ್ರತಿಭಟನೆ

| Published : Jan 19 2024, 01:45 AM IST

ಸಾರಾಂಶ

ಬೆಳಗಾವಿಯಲ್ಲಿ ಎಂಇಎಸ್‌ ಪುಂಡರು ಕನ್ನಡ ಪರ ಹೋರಾಟಗಾರರಾದ ಅನಿಲ್ ದಡ್ಡಮನಿ, ಸಂಪತ್‍ ಕುಮಾರ್ ಇವರುಗಳಿಗೆ ಕೊಲೆ ಬೆದರಿಕೆ ಹಾಕಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಚಿತ್ರದುರ್ಗ: ಬೆಳಗಾವಿಯಲ್ಲಿ ಎಂಇಎಸ್‌ ಪುಂಡರು ಕನ್ನಡ ಪರ ಹೋರಾಟಗಾರರಾದ ಅನಿಲ್ ದಡ್ಡಮನಿ, ಸಂಪತ್‍ ಕುಮಾರ್ ಇವರುಗಳಿಗೆ ಕೊಲೆ ಬೆದರಿಕೆ ಹಾಕಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿ ಮರಾಠಿ ಎಂಇಎಸ್‌ ಅವರು ಕನ್ನಡ ಪರ ಹೋರಾಟಗಾರರನ್ನು ಪದೆ ಪದೆ ಅವಮಾನಿಸುತ್ತಿರುವುದನ್ನು ಸಹಿಸಲಾಗುವುದಿಲ್ಲ. ಅನಿಲ್‍ ದಡ್ಡಮನಿ, ಸಂಪತ್‍ ಕುಮಾರ್‌ಗೆ ಇನ್‍ಸ್ಟಾಗ್ರಾಂನಲ್ಲಿ ಕೊಲೆ ಬೆದರಿಕೆ ಹಾಕಿರುವವರನ್ನು ಕೂಡಲೆ ಬಂಧಿಸಿ ಎಂಇಎಸ್‌ ಅನ್ನು ನಿಷೇಧಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರುನಾಡ ವಿಜಯಸೇನೆಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾನಿರತರು ಎಚ್ಚರಿಸಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ 3 ಪಕ್ಷಗಳು ಮರಾಠಿಗರ ಮತಕ್ಕಾಗಿ ಕನ್ನಡಕ್ಕೆ ಎಷ್ಟೆ ಅವಮಾನವಾದರೂ ನೋಡಿಕೊಂಡು ಸುಮ್ಮನಿರುವುದು ಯಾವ ನ್ಯಾಯ? ಕನ್ನಡ ನಾಡಿನ ಹಿತದೃಷ್ಟಿಯಿಂದ ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ 3 ಪಕ್ಷಗಳಿಗೂ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರತಿಭಟನೆ ನೇತೃತ್ವವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಜಗದೀಶ್ ಸಿ.ಉಪಾಧ್ಯಕ್ಷೆ ರತ್ನಮ್ಮ, ಯುವ ಘಟಕದ ಅಧ್ಯಕ್ಷ ನಾಗರಾಜ್ ಮುತ್ತು, ನಗರಾಧ್ಯಕ್ಷ ಅವಿನಾಶ್, ಮಹಮದ್ ರಫಿ, ಶಾನ್, ಸುರೇಶ್, ಅಖಿಲೇಶ್, ಹರೀಶ್, ಪ್ರದೀಪ್, ರಾಜಣ್ಣ, ಮಣಿಕಂಠ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.