ಸಾರಾಂಶ
ಕಾರವಾರ, ಹಳಿಯಾಳ: ಸುಮಾರು ಐದು ವರ್ಷಗಳವರೆಗೆ ಕಾರವಾರ(ಉತ್ತರ ಕನ್ನಡ) ಕ್ರೈಸ್ತ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಡಾ. ಡುಮಿಂಗ್ ಡಯಾಸ್ ಅವರು ಮಂಗಳವಾರ ಪದಗ್ರಹಣ ಮಾಡಿದರು.
ಕಾರವಾರ(ಉತ್ತರ ಕನ್ನಡ) ಕ್ರೈಸ್ತ ಧರ್ಮಕ್ಷೇತ್ರ ಸ್ಥಾಪನೆಯಾದ ನಂತರ ಧರ್ಮಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಮೂರನೇಯವರು.ಭವ್ಯ ಗುರುದೀಕ್ಷೆ: ಕಾರವಾರ ನಗರದ ಸೆಂಟ್ ಜೋಸೆಫ್ ಶಾಲೆಯ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನೂತನ ಧರ್ಮಾಧ್ಯಕ್ಷ ಡಾ. ಡುಮಿಂಗ್ ಡಯಾಸ್ ಅವರ ಧರ್ಮಾಧ್ಯಕ್ಷರ ಗುರುದೀಕ್ಷೆ ಧಾರ್ಮಿಕ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ನೆರವೇರಿತು.
ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾ ಧರ್ಮಾಧ್ಯಕ್ಷ ಡಾ. ಫೀಟರ್ ಮಚಾಡೊ, ಬೆಳಗಾವಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಡೆರಿಕ್ ಫರ್ನಾಂಡೀಸ್ ಹಾಗೂ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಫ್ರಾನ್ಸಿಸ್ ಸೆರಾವೊ ಅವರು ಗುರುದೀಕ್ಷೆ ಪೂಜಾ ವಿಧಿಯನ್ನು ನೆರವೇರಿಸಿದರು.ಗುರುದೀಕ್ಷೆ ಪೂಜಾವಿಧಿಗೂ ಮುನ್ನ ವ್ಯಾಟಿಕನ್ ಪ್ರತಿನಿಧಿ ಮೊನ್ಸಿಂಜೆರ್ ಅಲ್ಬರ್ಟಿನೋ ಅವರು ಕ್ರೈಸ್ತ ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರು ಕಳಿಸಿದ ನೂತನ ಧರ್ಮಾಧ್ಯಕ್ಷರ ನೇಮಕಾತಿ ಪತ್ರವನ್ನು ಓದಿ ತಿಳಿಸಿದರು. ಕಾರವಾರ ಧರ್ಮಕ್ಷೇತ್ರದ ಚಾನ್ಸಲರ್ ವಿಕ್ಟರ್ ಕ್ರಾಸ್ತ ಅವರು ಅದೇ ನೇಮಕಾತಿ ಪತ್ರದ ಕೊಂಕಣಿ ಭಾಷಾಂತರ ಪ್ರತಿಯನ್ನು ಓದಿದರು. ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೋ ಅವರು ಆಶೀರ್ವಚನ ನೀಡಿದರು.
ಪೂಜ್ಯರ ಸಾನ್ನಿಧ್ಯ: ಗುರುದೀಕ್ಷೆ ಸಮಾರಂಭಕ್ಕೆ ಗೋವಾ ಕಾರ್ಡಿನಲ್ ಹಾಗೂ ಭಾರತ ಮತ್ತು ಏಷಿಯಾ ಖಂಡದ ಧರ್ಮಾಧ್ಯಕ್ಷರ ಅಧ್ಯಕ್ಷ ಡಾ. ಫಿಲೀಪ್ ನೆರಿ ಫೆರಾವೊ, ವಿಶ್ರಾಂತ ಮಹಾಧರ್ಮಾಧ್ಯಕ್ಷ ಡಾ. ಬರ್ನಾಡ್ ಮೊರಸ್, ಭದ್ರಾವತಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ ಜೋಸೆಫ್ ಅರುಮಚಾಡತ್, ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಲಾರೆನ್ಸ್ ಮುಕುಜೈ ಇತರರು ಇದ್ದರು.ಕಾರವಾರ ಧರ್ಮಕ್ಷೇತ್ರ ಸೇರಿದಂತೆ ರಾಜ್ಯ ಹೊರರಾಜ್ಯದಿಂದ 400ಕ್ಕೂ ಹೆಚ್ಚು ಗುರುಗಳು, 300ಕ್ಕೂ ಹೆಚ್ಚು ಧರ್ಮಭಗಿಣಿಯರು ಪಾಲ್ಗೊಂಡಿದ್ದರು. ಕಾರವಾರ ಶಾಸಕ ಸತೀಶ್ ಸೈಲ್, ವಿಧಾನಪರಿಷತ್ ಸದಸ್ಯ ಐವನ್, ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವ ಆಗಮಿಸಿದ್ದರು.
ಸನ್ಮಾನ: ಧಾರ್ಮಿಕ ಪೂಜಾ ವಿಧಿಯ ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಗೋವಾ ಧರ್ಮಕ್ಷೇತ್ರದ ಕಾರ್ಡಿನಲ್ ಆಗಿ ಪದೋನ್ನತರಾಗಿ ಮೊದಲ ಬಾರಿಗೆ ಕಾರವಾರ ಧರ್ಮಕ್ಷೇತ್ರಕ್ಕ ಆಗಮಿಸಿದ ಭಾರತ ಮತ್ತು ಏಷಿಯಾ ಖಂಡದ ಧರ್ಮಾಧ್ಯಕ್ಷರ ಅಧ್ಯಕ್ಷ ಡಾ. ಫಿಲೀಪ್ ನೆರಿ ಫೆರಾವೊ ಅವರನ್ನು ಸನ್ಮಾನಿಸಲಾಯಿತು. 12 ವರ್ಷಗಳ ಕಾಲ ಕಾರವಾರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಹಾಗೂ 5 ವರ್ಷಗಳವರೆಗೆ ಆಡಳಿತಾಧಿಕಾರಿಯಾಗಿ ಯಶಸ್ವಿ ಸೇವೆ ಸಲ್ಲಿಸಿದ ಬೆಳಗಾವಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ ಡೆರಿಕ್ ಫರ್ನಾಂಡೀಸ್ ಅವರನ್ನು ಸನ್ಮಾನಿಸಲಾಯಿತು. ಗುರು ಸ್ಟೇನಿ ಪಿಂಟೋ ಹಾಗೂ ಗುರು ಅಂತೋನಿ ಡಯಾಸ್ ಕಾರ್ಯಕ್ರಮ ನಿರ್ವಹಿಸಿದರು.