ಕೇಂದ್ರದ ಮೇಲೆ ಗೂಬೆ ಕೂರಿಸಿದ ಕಾಂಗ್ರೆಸ್: ರವಿಕುಮಾರ

| Published : Apr 11 2024, 12:51 AM IST

ಕೇಂದ್ರದ ಮೇಲೆ ಗೂಬೆ ಕೂರಿಸಿದ ಕಾಂಗ್ರೆಸ್: ರವಿಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಪರಿಹಾರ ಕೊಡಲು ಆಗದೇ ಈಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ರೈತರಿಗೆ ಬರೀ ₹2000 ಪರಿಹಾರ ಕೊಟ್ಟಿರುವುದು ಸರಿಯಲ್ಲ.

ಹೊಸಪೇಟೆ: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಬರಗಾಲದಿಂದ ತತ್ತರಿಸಿದ ರೈತರ ನೆರವಿಗೆ ಧಾವಿಸದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ವಿಧಾನಪರಿಷತ್‌ ಸಚೇತಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಪರಿಹಾರ ಕೊಡಲು ಆಗದೇ ಈಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ರೈತರಿಗೆ ಬರೀ ₹2000 ಪರಿಹಾರ ಕೊಟ್ಟಿರುವುದು ಸರಿಯಲ್ಲ. ರೈತರಿಗೆ ಬೆಳೆ ಹಾನಿ ತಕ್ಕಂತೆ ಸೂಕ್ತ ಬರ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ರೈತರು ಮಂಗಳಾರತಿ ಎತ್ತುತ್ತಾರೆ. ಚುನಾವಣೆಯಲ್ಲಿ ಖಂಡಿತ ಕಪಾಳಮೋಕ್ಷ ಮಾಡುತ್ತಾರೆ ಎಂದರು.

ರಾಜ್ಯದ ರೈತರಿಗೆ ₹2000 ಪರಿಹಾರ ಕೊಟ್ಟಿದೆ. ಅದರ ಬದಲಿಗೆ ಇಂತಿಷ್ಟು ಅಂತ ಸೂಕ್ತ ಪರಿಹಾರ ಒದಗಿಸಬೇಕು. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು. ಆದರೆ, ಈಗ ಕೇಂದ್ರ ಸರ್ಕಾರ ಪರಿಹಾರ ಕೊಡಬೇಕು ಎಂದು ತಗಾದೆ ತೆಗೆದಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂದರು.

ರಾಜ್ಯ ಸರ್ಕಾರ ನಿಯಮ ಉಲ್ಲಂಘಿಸಿ 93 ಜನಕ್ಕೆ ಕ್ಯಾಬಿನೆಟ್ ಸ್ಥಾನಮಾನ ನೀಡಿದೆ. ತಲಾ ಒಬ್ಬರಿಗೆ ತಿಂಗಳಿಗೆ ಐದು ಲಕ್ಷ ರು. ಹೆಚ್ಚುವರಿ ಖರ್ಚು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಬಂಗಲೆ ದುರಸ್ತಿಗೆ ₹೬.೪೦ ಕೋಟಿ ವೆಚ್ಚ ಮಾಡಲಾಗಿದೆ. 30ಕ್ಕೂ ಅಧಿಕ ಇನ್ನೋವಾ ಹೊಸ ಕಾರು ಖರೀದಿಸಲಾಗಿದೆ. ರಾಜ್ಯ ಸರ್ಕಾರ ಈ ರೀತಿ ದುಂದುವೆಚ್ಚದಲ್ಲಿ ಮುಳುಗಿದೆ. ಆದರೆ, ರೈತರಿಗೆ ಬರ ಪರಿಹಾರ ನೀಡಲು ಮಾತ್ರ ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ಧಾರವಾಡದಿಂದ ಶಿರಹಟ್ಟಿಯ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ವಿರುದ್ಧ ಸ್ಪರ್ಧೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಬಿಜೆಪಿ ಯಾವತ್ತೂ ವೀರಶೈವ ಲಿಂಗಾಯತರ ಹಿತ ಬಯಸಿದೆ. ಎಲ್ಲಾ ಸಮಾಜಗಳ ಹಿತವನ್ನು ಬಿಜೆಪಿ ಕಾಯ್ದುಕೊಂಡು ಬಂದಿದೆ. ಬಿಜೆಪಿ ಸರ್ಕಾರ ಇದ್ದಾಗ ಬಸವ ಕಲ್ಯಾಣದ ಅಭಿವೃದ್ಧಿಗೂ ಶ್ರಮಿಸಲಾಗಿದೆ. ಭಾರತೀಯ ಜನತಾ ಪಾರ್ಟಿ ನಿಜಕ್ಕೂ ವೀರಶೈವ ಲಿಂಗಾಯತರಿಗೆ ನ್ಯಾಯ ಒದಗಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಶ್ರೀರಾಮನ ವ್ಯಾಪಾರಿಗಳು:

ಬಿಜೆಪಿ ಯಾವತ್ತೂ ಶ್ರೀರಾಮನ ಪೂಜಾರಿಗಳಾಗಿದ್ದಾರೆ. ಈ ದೇಶದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಲಿಲ್ಲ. ಆದರೆ, ಬಿಜೆಪಿ ಕೇಂದ್ರದ ಚುಕ್ಕಾಣಿ ಹಿಡಿದ ಬಳಿಕ ದೇಶದಲ್ಲಿ ಶಾಂತಿ ನೆಲೆಸಿದೆ. ಅಯೋಧ್ಯೆ ಶ್ರೀರಾಮಮಂದಿರಕ್ಕೆ ಮುಸ್ಲಿಮರು ದೇಣಿಗೆ ನೀಡಿದ್ದಾರೆ. ಶ್ರೀರಾಮನ ಹೆಸರಿನಲ್ಲಿ ಮೊದಲಿನಿಂದಲೂ ಕಾಂಗ್ರೆಸ್‌ನವರು ವ್ಯಾಪಾರ ಮಾಡುತ್ತಾ ಬಂದಿದ್ದಾರೆ ಎಂದರು.

ಬಿಜೆಪಿ ರಾಜ್ಯ ಖಜಾಂಚಿ ಸಿದ್ಧಾರ್ಥ ಸಿಂಗ್‌, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌, ಜೆಡಿಎಸ್‌ನ ತಾಲೂಕಾಧ್ಯಕ್ಷ ಸೋಮಶೇಖರ್ ಇದ್ದರು.