ಸಾರಾಂಶ
ರಾಮನಗರ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರಿಗಾಗಿ ಬಾಡೂಟ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸೇರಿದ ಬಿಡದಿಯ ಕೇತಗಾನಹಳ್ಳಿಯಲ್ಲಿನ ತೋಟದ ಮನೆ ಮೇಲೆ ಚುನಾವಣಾ ಎಂಸಿಸಿ ತಂಡ ದಾಳಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರದ್ದಾದ ಪ್ರಸಂಗ ಬುಧವಾರ ನಡೆದಿದೆ.
ಜೆಡಿಎಸ್ ವರಿಷ್ಠರಾದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಕೇತಗಾನಹಳ್ಳಿ ತೋಟದ ಮನೆ ಆವರಣದಲ್ಲಿ ಯುಗಾದಿ ಹಬ್ಬದ ವರ್ಷದಡುಕು ಪ್ರಯುಕ್ತ ಪ್ರಮುಖ ರಾಜಕೀಯ ಮುಖಂಡರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.ಈ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಎಂಸಿಸಿ ವೀಕ್ಷಕ ತಂಡ ತೋಟದ ಮನೆಕಡೆಗೆ ದೌಡಾಯಿಸಿದೆ. ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಕ್ಷಿಪ್ರ ಕಾರ್ಯಪಡೆ ತಂಡ (ಎಫ್‌ಎಸ್‌ಟಿ) ಹಾಗೂ ವಿಡಿಯೊ ಪರಿವೀಕ್ಷಣಾ ತಂಡಾಧಿ(ಎಂಸಿಸಿ)ಕಾರಿಗಳು ಕುಮಾರಸ್ವಾಮಿ ಅವರ ತೋಟದ ಮನೆಯ ಪ್ರವೇಶದ್ವಾರದ ಬಳಿ ಆಗಮಿಸಿದಾಗ ಅಲ್ಲಿದ್ದ ಕಾವಲು ಸಿಬ್ಬಂದಿ ತಡೆಯೊಡ್ಡಿ ಗೇಟ್ ತೆರೆಯಲು ನಿರಾಕರಿಸಿದರು.
ವಿಷಯ ತಿಳಿದ ಸಹಾಯಕ ಚುನಾವಣಾ ಅಧಿಕಾರಿ ರಮೇಶ್ ಅವರು ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆಸಿ ಒಳ ಪ್ರವೇಶಿಸಿದರು.ತೋಟದಲ್ಲಿ ಶಾಮಿಯಾನ, ಕುರ್ಚಿ ಮತ್ತು ಊಟದ ಟೇಬಲ್ ಹಾಕಿರುವುದನ್ನು ಹಾಗೂ ಮಧ್ಯಾಹ್ನದ ಊಟಕ್ಕೆ ಅಡುಗೆಯವರು ಬಾಡೂಟ ಸಿದ್ಧಪಡಿಸುತ್ತಿರುವುದನ್ನು ಗಮನಿಸಿದರು. ಆದರೆ, ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರು ಸೇರಿದಂತೆ ಕುಟುಂಬದ ಸದಸ್ಯರು ಇರಲಿಲ್ಲ. ಕೆಲಸ ಮಾಡುವ ಕಾರ್ಮಿಕರು ಮತ್ತು ಕೆಲ ಸಿಬ್ಬಂದಿ ಮಾತ್ರ ಇದ್ದರು. ಯುಗಾದಿ ಹಬ್ಬದ ಪ್ರಯುಕ್ತ ಮನೆಗೆ ಬರುವ ಸಂಬಂಧಿಕರಿಗೆ ಮಧ್ಯಾಹ್ನದ ಊಟ ಸಿದ್ಧಪಡಿಸಲಾಗುತ್ತಿದೆ. ಅದಕ್ಕಾಗಿ, ಹೊರಗಡೆ ಶಾಮಿಯಾನ ವ್ಯವಸ್ಥೆ ಕುರ್ಚಿ ಮತ್ತು ಟೇಬಲ್ ಹಾಕಲಾಗಿದೆ ಎಂದು ಸ್ಥಳದಲ್ಲಿದ್ದವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ವೇಳೆ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಕುಟುಂಬದ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಬಹುದು. ಆದರೆ 50ಕ್ಕೂ ಹೆಚ್ಚು ಜನ ಸೇರಿದರೆ ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ರಾಜಕೀಯ ನಾಯಕರು, ಮುಖಂಡರು ಭಾಗವಹಿಸುವಂತಿಲ್ಲ. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘನೆಯಾದರೆ ಕಾನೂನು ಕ್ರಮ ಜರುಗಿಸುತ್ತೇವೆ. ಒಂದು ತಂಡ ಇಲ್ಲಿದ್ದು ಎಲ್ಲವನ್ನೂ ಪರಿಶೀಲಿಸಲಿದೆ ಎಂದು ಚುನಾವಣಾಧಿಕಾರಿ ಎಚ್ಚರಿಕೆ ನೀಡಿ ಅಲ್ಲಿ ಜೋಡಿಸಿದ್ದ ಟೇಬಲ್ ಮತ್ತು ಕುರ್ಚಿಗಳನ್ನು ತೆಗೆಸಿದ್ದಾರೆ.ಈ ಬಗ್ಗೆ ಸಹಾಕಯ ಚುನಾವಣಾಧಿಕಾರಿ ರಮೇಶ್ ಪ್ರತಿಕ್ರಿಯಿಸಿ, ಎಂಸಿಸಿ ತಂಡದ ಅಧಿಕಾರಿಗಳಿಗೆ ತೋಟದ ಮನೆಯೊಳಕ್ಕೆ ಬಿಡುತ್ತಿಲ್ಲ ಎಂಬ ಮಾಹಿತಿ ತಿಳಿದು ನಾನೇ ಸ್ವತಃ ಸ್ಥಳಕ್ಕೆ ತೆರಳಿದೆ. ರಾಜಕೀಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಲ್ಲಿರಲಿಲ್ಲ. ರಾಜಕೀಯ ಪಕ್ಷದ ಬಾವುಟ ಅಥವಾ ಚಿಹ್ನೆ ಇರಲಿಲ್ಲ. ಆದರೂ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ರೀತಿ ಊಟದ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ಅಲ್ಲಿದ್ದವರಿಗೆ ಎಚ್ಚರಿಕೆ ನೀಡಲಾಗಿದೆ ಶಾಮಿಯಾನ, ಕುರ್ಚಿ ಹಾಗೂ ಟೇಬಲ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.ಬಾಕ್ಸ್...........ನೀತಿ ಸಂಹಿತೆ ಹಿನ್ನೆಲೆ ಬಾಡೂಟ ರದ್ದು
ಚುನಾವಣೆ ಸಂಬಂಧ ತೋಟದ ಮನೆಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಗೆ ಬರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಭೆ ಕುರಿತು ಸಂಬಂಧಪಟ್ಟವರಿಂದ ಅನುಮತಿ ಪಡೆದಿಲ್ಲ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ತೋಟದಮನೆ ಆವರಣದಲ್ಲಿ ಏರ್ಪಡಿಸಲಾಗಿದ್ದ ವರ್ಷದಡುಕು ಬಾಡೂಟ ವ್ಯವಸ್ಥೆ ರದ್ದಾದ ಕಾರಣ ಊಟಕ್ಕೆ ಆಗಮಿಸಿದ್ದ ಕೆಲ ಮುಖಂಡರು ಗೊಣಗುತ್ತಾ ವಾಪಸ್ ತೆರಳುತ್ತಿದ್ದುದು ಕಂಡು ಬಂದಿತು. ಈ ವೇಳೆ ತೋಟದ ಮನೆಗೆ ಆಗಮಿಸಿದ ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ಅವರು ವಿಷಯ ತಿಳಿದು ವಾಪಸ್ ತೆರಳಿದರು. ಕೋಟ್..ತೋಟದ ಮನೆ ಆವರಣದಲ್ಲಿ ಅನುಮತಿ ಪಡೆಯದೆ ಸಭೆ ಮತ್ತು ಊಟದ ವ್ಯವಸ್ಥೆ ಮಾಡಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಲಾಗಿದ್ದು, ಎಲ್ಲವನ್ನೂ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಡಿಯೋ ವೀಕ್ಷಕರ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ. ಒಂದು ವೇಳೆ ರಾಜಕೀಯ ಮುಖಂಡರಿಗೆ ಬಾಡೂಟ ಆಯೋಜಿಸಿರುವುದು ಖಚಿತವಾದರೆ, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.
- ರಮೇಶ್, ಸಹಾಯಕ ಚುನಾವಣಾಧಿಕಾರಿ10ಕೆಆರ್ ಎಂಎನ್ 4,5.ಜೆಪಿಜಿ4.ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬಿಡದಿಯ ತೋಟದ ಮನೆಗೆ ಚುನಾವಣಾ ಎಂಸಿಸಿ ತಂಡದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
5.ಚುನಾವಣಾ ಎಂಸಿಸಿ ತಂಡದ ಅಧಿಕಾರಿಗಳು ಕುರ್ಚಿ ಮತ್ತು ಶಾಮಿಯಾನ ತೆಗೆಸುತ್ತಿರುವುದು.