ಕಲಬುರಗಿ ದಿಶಾ ಕಾಲೇಜಿಗೆ ದಾಖಲೆಯ 295 ಡಿಸ್ಟಿಂಕ್ಷನ್‌

| Published : Apr 11 2024, 12:50 AM IST

ಸಾರಾಂಶ

ದಿಶಾ ಪಪೂ ಕಾಲೇಜು ಪ್ರಸಕ್ತ ಸಾಲಿನ ಪಿಯುಸಿ ಫಲಿತಾಂಶದಲ್ಲಿ ದಾಖಲೆ ಬರೆದಿದೆ. ಕಾಲೇಜು ಆರಂಭ‍ಾಗಿ 8 ವರ್ಷಗಳಾಗಿದ್ದು ಈ ಬಾರಿಯ ಫಲಿತಾಂಶ ಹಲವು ಕಾರಣಗಳಿಂದಾಗಿ ಕಾಲೇಜಿಗೆ ವಿಶೇಷವಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ದಿಶಾ ಪಪೂ ಕಾಲೇಜು ಪ್ರಸಕ್ತ ಸಾಲಿನ ಪಿಯುಸಿ ಫಲಿತಾಂಶದಲ್ಲಿ ದಾಖಲೆ ಬರೆದಿದೆ. ಕಾಲೇಜು ಆರಂಭ‍ಾಗಿ 8 ವರ್ಷಗಳಾಗಿದ್ದು ಈ ಬಾರಿಯ ಫಲಿತಾಂಶ ಹಲವು ಕಾರಣಗಳಿಂದಾಗಿ ಕಾಲೇಜಿಗೆ ವಿಶೇಷವಾಗಿದೆ.

ಪರೀಕ್ಷೆ ಬರೆದ 375 ವಿದ್ಯಾರ್ಥಿಗಳಲ್ಲಿ 373 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.99.46 ಪ್ರತಿಶತ ಫಲಿತಾಂಶ ದಾಖಲಾಗಿದೆ. 295 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ತೇರ್ಗಡೆಯಾಗಿದ್ದಾರೆ, 82 ವಿದ್ಯಾರ್ಥಿಗಳು ಪ್ರತ್ಯೇಕ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. 168 ವಿದ್ಯಾರ್ಥಿಗಳು ಶೇ.90ರಷ್ಟು ಅಂಕ ಪಡೆದು ತೇರ್ಗಡೆಯಾಗಿದ್ದಾರೆ.

ಸುಹಾಸಿನಿ ಶಾಂತಪ್ಪ ಎಂಬ ವಿದ್ಯಾರ್ಥಿ 586 ಅಂಕ ಪಡೆದು (ಶೇ. 97.67) ಕಾಲೇಜಿಗೆ ಮೊದಲಿಗಳಾಗಿ ಹೊರಹೊಮ್ಮಿದ್ದಾಳೆ. ಉಳಿದಂತೆ ಸೂಗೂರೇಶ ಈತ 584 ಅಂಕ ಗಳಿಸಿ (97.33), ಓಂಕಾರ ರಾಜು 583 (97.71) ಅಂಕ ಗಳಿಸಿ ಕಾಲೇಜಿಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯರಾಗಿ ಹೊರಹೊಮ್ಮಿದ್ದಾರೆ.

ಹೆಚ್ಚಿನ ಅಂಕ ಪಡೆದ ಕಾಲೇಜಿನ ಟಾಪ್ಪರ್‌ ಸುಹಾಸಿನಿ ಇ‍ವರು ಕನ್ನಡಪ್ರಭ ಜೊತೆ ಮಾತನಾಡಿ, ತಾವು ಕನ್ನಡ ಮಾಧ್ಯಮದಲ್ಲೇ ಹೈಸ್ಕೂಲ್‌ ಓದಿದರೂ ದಿಶಾ ಕಾಲೇಜಲ್ಲಿ ಪಿಯುಸಿ ವಿಜ್ಞಾನ ಪ್ರವಶ ಪಡೆದೆ, ಇಲ್ಲಿನ ಬೋಧನೆ ತುಂಬ ಪರಿಣಾಮಕಾರಿಯಾಗಿದ್ದು ತಮಗೆ ಮಾಧ್ಯಮ ಗೊಂದಲವಾಗಲಿ, ಓದಿನ ಗೊಂದಲವಾಗಲಿ ಯವುದೂ ಕಾಡಲೇ ಇಲ್ಲ. ಇದೇ ತಮ್ಮ ಸಾಧನೆಯ ಗುಟ್ಟೆಂದರು.

ದಿಶಾ ಕಾಲೇಜಿನಲ್ಲಿ ಮಾಸಿಕ, ಸಾಪ್ತಾಹಿಕ ನಡೆಸುವ ಪರೀಕ್ಷೆಗಳು ತಮ್ಮ ಅಂಕ ಗಳಿಗೆ ಕಾರಣವಾಯ್ತು. ಇದಲ್ಲದೆ ಉಫನ್ಯಾಸಕರು ಸದಾಕಾಲ ಜೊತೆಗಿದ್ದು ಓದಿನ ಬಗ್ಗೆ ನೀಡುತ್ತಿದ್ದ ಮಾರ್ಗದರ್ಶನವು ತಮ್ಮ ಸಾಧನೆಗೆ ನೆರವಾಯ್ತು ಎಂದು ಸುಹಾಸಿನಿ ಹೇಳಿದ್ದಾರೆ.

ಪರಿಣಾಮಕಾರಿ ಬೋಧನೆ, ಕಲಿಕಾ ಗುಣಣಟ್ಟ ಕಾಪಾಡಿಕೊಡಿರುವ ದಿಶಾ ಕಾಲೇಜು ಮಕ್ಕಳ ಸ್ನೇಹಿಯಾಗಿದೆ. ವಿದ್ಯಾರ್ಥಿಗಳ ನಿರಂತರ ಕಲಿಕೆಯ ಧೋರಣೆಯೂ ಕಾಲೇಜಿನ ಕೀರ್ತಿ ಹೆಚ್ಚಲು ಕಾರಣವಾಗಿದೆ. ಇಲ್ಲಿನ ಬೋಧಕರ ಶ್ರದ್ಧಾ ಬೋಧನೆಯೂ ಮಕ್ಕಳ ಸಾಧನೆ ಹೆಚ್ಚಿಸಿದೆ ಎಂದು ದಿಶಾ ಕಾಲೇಜಿನ ಅಧ್ಯಕ್ಷರಾದ ಶಿವಾನಂದ ಖಜೂರ್ಗಿ ಹೇಳಿದ್ದಾರೆ.