ಬಲವಂತ ಮಾಡಿದರೆ ರಾಜಕೀಯ ಬಿಡುತ್ತೇನೆ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ

| Published : Apr 11 2024, 12:50 AM IST

ಬಲವಂತ ಮಾಡಿದರೆ ರಾಜಕೀಯ ಬಿಡುತ್ತೇನೆ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ
Share this Article
  • FB
  • TW
  • Linkdin
  • Email

ಸಾರಾಂಶ

‘ನನಗೆ ಪ್ರೀತಿ ತೋರಿಸಿದರೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತೇನೆ. ಏನಾದರೂ ನನಗೆ ಬಲವಂತ ಮಾಡಿದರೆ ರಾಜಕೀಯವನ್ನೇ ಬಿಟ್ಟು ಬಿಡುತ್ತೇನೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿದ್ದಾರೆ. ಹಾಸನದ ವಿದ್ಯಾನಗರದಿಂದ ಪ್ರಚಾರ ಆರಂಭಿಸಿದ ಪ್ರೀತಂಗೌಡ ಮೈತ್ರಿ ಅಭ್ಯರ್ಥಿ ಪರ ಇದೇ ಮೊದಲ ಬಾರಿಗೆ ಬೆಂಬಲಿಗರೊಂದಿಗೆ ಕರಪತ್ರಗಳನ್ನು ಹಂಚಿದರು.

ಮೋದಿ ಹೆಸರಲ್ಲಿ ಮತ ಕೇಳ್ತೀನಿ

ಕನ್ನಡಪ್ರಭ ವಾರ್ತೆ ಹಾಸನ

‘ನನಗೆ ಪ್ರೀತಿ ತೋರಿಸಿದರೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತೇನೆ. ಏನಾದರೂ ನನಗೆ ಬಲವಂತ ಮಾಡಿದರೆ ರಾಜಕೀಯವನ್ನೇ ಬಿಟ್ಟು ಬಿಡುತ್ತೇನೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿದ್ದಾರೆ.

ಹೈಕಮಾಂಡ್ ಸೂಚನೆಗೆ ಮಣಿದು ಎನ್‌ಡಿಎ ಅಭ್ಯರ್ಥಿ ಪರ ನಗರದ ವಿದ್ಯಾನಗರದಿಂದ ಪ್ರಚಾರ ಆರಂಭಿಸಿದ ಪ್ರೀತಂಗೌಡ ಮೈತ್ರಿ ಅಭ್ಯರ್ಥಿ ಪರ ಇದೇ ಮೊದಲ ಬಾರಿಗೆ ಬೆಂಬಲಿಗರೊಂದಿಗೆ ಕರಪತ್ರಗಳನ್ನು ಹಂಚುವ ಮೂಲಕ ಮತಯಾಚನೆ ಮಾಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ‘ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗಬೇಕು ಎಂದು ಪ್ರಚಾರ ಆರಂಭಿಸಿದ್ದೇನೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲುವ ಮೂಲಕ ಇಡೀ ದೇಶದಲ್ಲಿ 400ಕ್ಕೂ ಹೆಚ್ಚು ಸೀಟ್‌ಗಳನ್ನು ಗೆಲ್ಲಬೇಕು. ಹಿರಿಯರು ನಮಗೆ ಒಂದು ಜವಾಬ್ದಾರಿ ಕೊಟ್ಟಿದ್ದಾರೆ. ನಮ್ಮ ಬೂತ್ ನಂಬರ್ 89 ರಿಂದ ಪ್ರಚಾರ ಆರಂಭಿಸಿದ್ದೇವೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು. 2021 ಬೂತ್ ಹಾಸನ ಲೋಕಸಭಾ ಕ್ಷೇತ್ರಕ್ಕೆ ಬರುತ್ತದೆ. ನಾಳೆ ಸಿಮೆಂಟ್ ಮಂಜು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಆಲೂರಿನಲ್ಲಿ ಪ್ರಚಾರ ಮಾಡಲು ಸೂಚನೆ ಕೊಟ್ಟಿದ್ದೇನೆ. ನಾವು ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ. ಎನ್‌ಡಿಎ ಕೂಟ ಗೆಲ್ಲಿಸುವುದೇ ನಮ್ಮ ಗುರಿ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕಿಂತ ಒಂದು ಮತವನ್ನು ಹೆಚ್ಚು ಕೊಡಿಸಲು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇನೆ’ ಎಂದು ಹೇಳಿದರು.

‘ಹೊಳೆನರಸೀಪುರ ಕಾಂಗ್ರೆಸ್ ಅಭ್ಯರ್ಥಿಗಿಂತ ಎನ್‌ಡಿಎ ಅಭ್ಯರ್ಥಿ ಎಷ್ಟು ಲೀಡ್ ತೆಗೆದುಕೊಳ್ಳುತ್ತಾರೋ ಅದಕ್ಕಿಂತ ಒಂದು ಮತ ಹೆಚ್ಚಿಗೆ ಕೊಡಿಸುವುದು ನನ್ನ ಗುರಿ. ಯಾರೇ ಆದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲೇ ಓಟು ಕೇಳಬೇಕು. ಕರ್ನಾಟಕದಿಂದ ಕಾಶ್ಮೀರದವರೆಗೂ ಮೋದಿ ಅವರ ಹೆಸರಿನಲ್ಲಿ ಮತ ಕೇಳಬೇಕು. ಎಲ್ಲಿಯೂ ಪ್ರಜ್ವಲ್ ರೇವಣ್ಣ ಅವರ ಹೆಸರು ಬಳಕೆ ಮಾಡಲಿಲ್ಲ. ಅವರು ಆರು ಬಾರಿ ಶಾಸಕರು, ಅವರ ತಂದೆ ಪ್ರಧಾನ ಮಂತ್ರಿ ಆಗಿದ್ದವರು. ಎನ್‌ಡಿಎ ಅಭ್ಯರ್ಥಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಮತ ತೆಗೆದುಕೊಳ್ಳುತ್ತಾರೆ ಅದಕ್ಕಿಂತ ಒಂದು ಮತ ಹೆಚ್ಚು ಕೊಡಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಪ್ರೀತಿ ತೋರಿಸಿದರೆ ಕೆಲಸ ಮಾಡುವವನು. ಕಂಪ್ಲೆಂಟ್ ಮಾಡಿದರೆ ನನಗೆ ರಾಜಕೀಯ ಬೇಡ ಅಂತ ಮನೆಯಲ್ಲಿ ಕೂರ್ತಿನಿ. ನನಗೆ ಯಾವ ರಾಜ್ಯ ನಾಯಕರು ಸೂಚನೆ ಕೊಟ್ಟಿಲ್ಲ. ಯಾವ ರಾಜ್ಯ ನಾಯಕರನ್ನಾದರೂ ಕೇಳಿ? ಬಾವಿ ಕಪ್ಪೆಯಾಗಿ ಇರುವುದು ಬೇಡ ಅಂತ ಎರಡು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಕೊಟ್ಟಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ನನಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದ್ದಾರೆ. ಒಬ್ಬ ಸರ್ಕಾರಿ ನೌಕರರ ಮಗನನ್ನು ರಾಜ್ಯಮಟ್ಟದಲ್ಲಿ ಬೆಳೆಸುವುದೇ ಬಿಜೆಪಿ ಪಕ್ಷ. ಬೂತ್ ಗೆದ್ದರೆ ದೇಶ ಗೆಲ್ಲಬಹುದು ಎಂಬು ಕಲ್ಪನೆ ನಮ್ಮದು. ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯಾರು ಯಾರನ್ನ ಸಂಪರ್ಕ ಮಾಡುವುದು ಇರುವುದಿಲ್ಲ. ನಮ್ಮ ರಾಜ್ಯಾಧ್ಯಕ್ಷರ ಏನು ಸೂಚನೆ ಕೊಡ್ತಾರೆ ಆ ಕೆಲಸ ಮಾಡ್ತೀನಿ. ಈಗಾಗಲೇ ಬೂತ್ ಮಟ್ಟದ ಪದಾಧಿಕಾರಿಗಳು, ತಾಲೂಕು ಜಿಲ್ಲಾಮಟ್ಟದ ಪದಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ನನ್ನ ವಿರೋಧಿಗಳು ಯಾರು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ. ಅವಾಗವಾಗ ನಾನು ಹಾಸನಕ್ಕೆ ಬರ್ತಿರ್ತೀನಿ’ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಬೂತ್ ಅಧ್ಯಕ್ಷ ದರ್ಶನ್, ನಗರ ಮಂಡಲ ಅಧ್ಯಕ್ಷ ಯೋಗೀಶ್, ವಿದ್ಯಾನಗರದ ಮುಖಂಡ ಗುರುಪ್ರಸಾದ್, ಅಂಗಡಿ ಮಂಜಣ್ಣ, ವೆಂಕಟೇಶ್, ತಾಪಂ ಮಾಜಿ ಸದಸ್ಯ ಪ್ರದೀಪ್, ತುಳಸಿ ಪ್ರಸಾದ್, ಸುಜೀತ್, ಸತ್ಯಮಂಗಲದ ಹರ್ಷಿತ್, ಸತ್ಯಮಂಗಲ ಗೀರಿಶ್, ರಾಜೇಶ್ ಇದ್ದರು.

ಹಾಸನದ ವಿದ್ಯಾನಗರದಿಂದ ಪ್ರಚಾರ ಆರಂಭಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ.