ಸಾರಾಂಶ
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ -2 ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏ.29ರಿಂದ ಮೇ 14ರವರೆಗೆ ನಡೆಸುವುದಾಗಿ ತಿಳಿಸಿದೆ.
ಪರೀಕ್ಷೆ-1ರಲ್ಲಿ ಫೇಲಾಗಿರುವ ವಿಷಯಗಳಿಗೆ, ಎಲ್ಲ ವಿಷಯಗಳಲ್ಲೂ ಪಾಸಾಗಿದ್ದರೂ ಫಲಿತಾಂಶವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು, ಪರೀಕ್ಷೆ-1ಗೆ ನೋಂದಾಯಿಸಿ ಕಾರಣಾಂತರಗಳಿಂದ ಹಾಜರಾಗದವರು 2ನೇ ಪರೀಕ್ಷೆ ಬರೆಯಬಹುದು. ಆಸಕ್ತರು ತಮ್ಮ ಪಿಯು ಕಾಲೇಜು ಅಥವಾ ಮಂಡಳಿಯ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕವೇ ಪರೀಕ್ಷೆಗೆ ನೋಂದಾಯಿಸಬಹುದು.
ಇದೇ ಮೊದಲ ಬಾರಿಗೆ ಮಂಡಳಿಯು ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿದೆ. ಒಂದು ವೇಳೆ 2ನೇ ಪರೀಕ್ಷೆ ಫಲಿತಾಂಶವೂ ಸಮಾಧಾನವಾಗದವರು, ಪರೀಕ್ಷೆ-3 ಅನ್ನು ಬರೆಯಬಹುದು. ಈ ಯಾವುದೂ ಪೂರಕ ಪರೀಕ್ಷೆ ಆಗಿರುವುದಿಲ್ಲ. ಮೂರೂ ಪರೀಕ್ಷೆಗಳಲ್ಲಿ ಒಟ್ಟಾರೆ ಅಥವಾ ವಿಷಯವಾರು ಉತ್ತಮ ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳುವ ವಿಶೇಷ ಅವಕಾಶ ವಿದ್ಯಾರ್ಥಿಗಳದ್ದಾಗಿದೆ. 2ನೇ ಪರೀಕ್ಷೆ ಬರೆಯಲಿಚ್ಛಿಸದವರಿಗೆ ಒಂದು ವಾರದಲ್ಲಿ ಅಂಕಪಟ್ಟಿ ನೀಡಲಾಗುವುದು. 2ನೇ ಪರೀಕ್ಷೆ ಬರೆಯುವವರಿಗೆ ಫಲಿತಾಂಶ ಪ್ರಕಟಗೊಂಡ ಬಳಿಕ ಅಂಕಪಟ್ಟಿ ದೊರೆಯಲಿದೆ ಎಂದು ಮಂಡಳಿ ಅಧ್ಯಕ್ಷೆ ಮಂಜು ಶ್ರೀ ತಿಳಿಸಿದ್ದಾರೆ.
ವೇಳಾಪಟ್ಟಿ
ಏ.29- ಕನ್ನಡ, ಅರೆಬಿಕ್, ಏ.30- ಇತಿಹಾಸ, ಭೌತಶಾಸ್ತ್ರ, ಮೇ 2- ಇಂಗ್ಲೀಷ್, ಮೇ 3 -ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 4- ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಗೃಹವಿಜ್ಞಾನ, ಮೂಲಗಣಿತ, ಮೇ 9 - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ, ಮೇ 11- ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಮೇ 13- ಅರ್ಥಶಾಸ್ತ್ರ, ಮೇ 14- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಮೇ 15- ಹಿಂದಿ, ಮೇ 16- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಎನ್‌ಎಸ್‌ಕ್ಯೂಎಫ್ ವಿಷಯಗಳು. ಅವಧಿ: ಬೆಳಗ್ಗೆ 10.15ರಿಂದ ರಿಂದ ಮಧ್ಯಾಹ್ನ 1.30.