ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಸಿಯನ್ ಬೋಟ್ ಒಂದು ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಏಕಾಏಕಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 22 ಮೀನುಗಾರರನ್ನು ಮತ್ತೊಂದು ಬೋಟ್‌ನ ಸಿಬ್ಬಂದಿ ಸಾಹಸಪಟ್ಟು ರಕ್ಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಸಿಯನ್ ಬೋಟ್ ಒಂದು ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಏಕಾಏಕಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 22 ಮೀನುಗಾರರನ್ನು ಮತ್ತೊಂದು ಬೋಟ್‌ನ ಸಿಬ್ಬಂದಿ ಸಾಹಸಪಟ್ಟು ರಕ್ಷಿಸಿದ್ದಾರೆ.ಭಾನುವಾರ ಸಂಜೆ ಈ ಅವಘಡ ಸಂಭವಿಸಿದೆ. ಕಾರವಾರ ತಾಲೂಕಿನ ಮುದಗಾ ಬಂದರಿನಿಂದ ದಿನೇಶ ಕಾಂಚನ್ ಮಾಲೀಕತ್ವದ ಶ್ರೀ ಅಮ್ಮ ಹೆಸರಿನ ಪರ್ಷಿಯನ್ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷದಿಂದ ಬೋಟ್‌ಗೆ ನೀರು ನುಗ್ಗಿ ಮುಳುಗಲಾರಂಭಿಸಿದೆ. ತಕ್ಷಣವೇ ಅಪಾಯದ ಮುನ್ಸೂಚನೆ ಅರಿತ ಸಿಬ್ಬಂದಿ ರಕ್ಷಣೆಗೆ ಮೊರೆ ಇಟ್ಟಿದ್ದಾರೆ. ಈ ವೇಳೆ ಸಮೀಪದಲ್ಲೇ ಇದ್ದ ನರೇಶ್ ತಾಂಡೇಲ ಮಾಲೀಕತ್ವದ ಜಲರಾಜ ಬೋಟ್ ತಕ್ಷಣ ರಕ್ಷಣೆಗೆ ಧಾವಿಸಿದೆ.ತಪ್ಪಿದ ಭಾರಿ ದುರಂತ:

ಸಮಯಪ್ರಜ್ಞೆ ಮೆರೆದ ಜಲರಾಜ ಬೋಟ್‌ನ ಮೀನುಗಾರರು, ಸಮುದ್ರದಲ್ಲಿ ಮುಳುಗುತ್ತಿದ್ದ ಶ್ರೀ ಅಮ್ಮ ಬೋಟ್‌ನಲ್ಲಿದ್ದ ಎಲ್ಲಾ 22 ಮೀನುಗಾರರನ್ನು ತಮ್ಮ ಬೋಟ್‌ಗೆ ಹತ್ತಿಸಿಕೊಂಡು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ಪ್ರಾಣಹಾನಿ ತಪ್ಪಿದಂತಾಗಿದೆ. ಘಟನೆಯಿಂದಾಗಿ ಸಮುದ್ರ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಮೀನುಗಾರರು ಪಾರಾಗಿದ್ದರೂ, ಮುಳುಗಿರುವ ಬೋಟ್ ಹಾಗೂ ಅದರಲ್ಲಿದ್ದ ಎರಡು ಬೃಹತ್ ಬಲೆಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಸೋಮವಾರವೂ ಭರದಿಂದ ಸಾಗುತ್ತಿದೆ. ಸ್ಥಳೀಯ 6 ಮೀನುಗಾರಿಕಾ ಬೋಟ್‌ಗಳು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಕಾರವಾರದ ಮುದಗಾ ಬಂದರಿನಿಂದಲೂ 10ಕ್ಕೂ ಹೆಚ್ಚು ಬೋಟ್‌ಗಳು ರಕ್ಷಣಾ ಕಾರ್ಯಾಚರಣೆಗೆ ತೆರಳಿವೆ.

ಬೋಟ್ ಮತ್ತು ಅದರಲ್ಲಿ ಬಳಸಲಾಗಿದ್ದ ದುಬಾರಿ ಬಲೆಗಳು ಸಮುದ್ರಪಾಲು ಆಗಿರುವುದರಿಂದ ಬೋಟ್ ಮಾಲೀಕರಿಗೆ ಕೋಟ್ಯಂತರ ರುಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.