ಸಾರಾಂಶ
ಧಾರವಾಡ:
ಮೈಸೂರಿನ ದಿ ರೈಲ್ವೆ ಕೋ-ಆಪರೇಟಿವ್ ಬ್ಯಾಂಕಿನ ಅಕ್ರಮ ನೇಮಕಾತಿ ಕುರಿತಂತೆ ಕಾರವಾರ ಪಿಜಿ ಸೆಂಟರ್ ಆಡಳಿತಾಧಿಕಾರಿ ಜಗನ್ನಾಥ ರಾಠೋಡ ಅವರನ್ನು ಅಮಾನತು ಮಾಡಿರುವುದಾಗಿ ಕುಲಪತಿ ಡಾ. ಕೆ.ಬಿ. ಗುಡಸಿ ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲಿ 21 ಹುದ್ದೆಗಳು ಅಕ್ರಮ ನೇಮಕ ಮಾಡಿರುವುದು ಬೆಳಕಿಗೆ ಬಂದಿದೆ. ಮೌಲ್ಯಮಾಪನ ಕುಲಸಚಿವರಿಗೆ ಪರೀಕ್ಷೆ ನಡೆಸುವ ಅಧಿಕಾರಿ ಇರಲಿದೆ. ಆದರೆ, ಕಾರವಾರ ಪಿಜಿ ಸೆಂಟರ್ ಆಡಳಿತಾಧಿಕಾರಿ ಜಗನ್ನಾಥ ರಾಠೋಡ ಕವಿವಿಯ ನಿಯಮ ಪಾಲಿಸದೆ, ಕವಿವಿ ಹೆಸರಲ್ಲಿ ಅಕ್ರಮವಾಗಿ ಪರೀಕ್ಷೆ ನಡೆಸಿದ್ದಾರೆ ಎಂದು ಹೇಳಿದರು.
ನೇಮಕಾತಿ ಅಕ್ರಮ ಗಂಭೀರವಾಗಿ ಪರಿಗಣಿಸಿದ ಕವಿವಿ ಆಡಳಿತ ಮಂಡಳಿಯ ಸಿಂಡಿಕೇಟ್ ಸಭೆಯಲ್ಲಿ ಅಕ್ರಮದ ರೂವಾರಿ, ಆಡಳಿತಾಧಿಕಾರಿ ಜಗನ್ನಾಥ ರಾಠೋಡ ಅವರನ್ನು ಅಮಾನತು ಮಾಡಿ, ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.ಅಲ್ಲದೇ, ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಾಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಸದ್ಯ ಈ ಸಮಿತಿ ತನಿಖೆ ನಡೆಸುತ್ತಿದೆ. ವಿಚಾರಣೆಗೆ ಹಾಜರಾಗಲು ರಾಠೋಡ 15 ದಿನ ಸಮಯ ಕೇಳಿದ್ದು, ಅವರಿಗೆ ಸಮಯ ನೀಡುವುದಿಲ್ಲ. ಬದಲಾಗಿ ವಿಚಾರಣೆ ಎದುರಿಸಲಿ ಎಂದರು. ಪರೀಕ್ಷಾ ಅಕ್ರಮಕ್ಕೂ ಹಾಗೂ ಕವಿವಿಗೂ ಯಾವುದೇ ಸಂಬಂಧವಿಲ್ಲ. ಪ್ರಸ್ತುತ ನಡೆಸಿದ ಪರೀಕ್ಷೆ ರದ್ದುಪಡಿಸುತ್ತಾರೋ? ಅಥವಾ ಇಲ್ಲವೋ? ಎಂಬ ನಿರ್ಧಾರ ಬ್ಯಾಂಕಿಗೆ ಬಿಟ್ಟಿದೆ. ಆದರೆ, ರಾಠೋಡ್ ಅವರನ್ನು ಅಮಾನತು ಮಾಡಿದ್ದಾಗಿ ಹೇಳಿದರು.