ಸಾರಾಂಶ
ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ಭಾಷಾಂತರ ಅದ್ವಾನ ವಿಚಾರ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ವಿಚಾರಣೆಯಲ್ಲಿದೆ. ಹೀಗಾಗಿ, ಈ ಹಂತದಲ್ಲಿ ಮರುಪರೀಕ್ಷೆಗೆ ಸೂಚನೆ ನೀಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು : ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ಭಾಷಾಂತರ ಅದ್ವಾನ ವಿಚಾರ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ವಿಚಾರಣೆಯಲ್ಲಿದೆ. ಹೀಗಾಗಿ, ಈ ಹಂತದಲ್ಲಿ ಮರುಪರೀಕ್ಷೆಗೆ ಸೂಚನೆ ನೀಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯ ಉಭಯ ಸದನಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ನಿಯಮ 69 ಮತ್ತು ವಿಧಾನ ಪರಿಷತ್ತಿನಲ್ಲಿ ನಿಯಮ 330ರ ಮೇರೆಗೆ ವಿಪಕ್ಷಗಳು ಎತ್ತಿದ್ದ ಕೆಪಿಎಸ್‌ಸಿ ವಿಚಾರಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ, ಎರಡನೇ ಬಾರಿಯೂ ಆಗಿರುವ ತಪ್ಪುಗಳನ್ನು ಪರಿಶೀಲಿಸಲು ವಿಷಯ ತಜ್ಞರ ಸಮಿತಿಯನ್ನು ಕೆಪಿಎಸ್‌ಸಿ ರಚಿಸಿತ್ತು. ಪರಿಶೀಲನೆ ಬಳಿಕ 6 ಪ್ರಶ್ನೆಗಳಿಗೆ ಕೃಪಾಂಕ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ವಿಷಯ ತಜ್ಞರ ಸಮಿತಿ ನೀಡುವ ಅಭಿಪ್ರಾಯಗಳನ್ನು ಪರಿಗಣಿಸುವುದನ್ನು ‘ಉತ್ತರ ಪ್ರದೇಶ ಸರ್ವಿಸ್ ಕಮಿಷನ್ ವಿರುದ್ಧ ರಾಹುಲ್ ಸಿಂಗ್’ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮತ್ತೊಂದೆಡೆ, ಅಭ್ಯರ್ಥಿಗಳು ಕೂಡ ಕೆಎಟಿ ಮೊರೆ ಹೋಗಿರುವ ಕಾರಣ ಮರುಪರೀಕ್ಷೆಗೆ ಸೂಚನೆ ನೀಡಲಾಗದು ಎಂದರು.
ಪ್ರಶ್ನೆಪತ್ರಿಕೆಯಲ್ಲಿನ ಭಾಷಾಂತರದ ತಪ್ಪುಗಳಿಂದ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಹೀಗಾಗಿ, ಮತ್ತೊಮ್ಮೆ ಪರೀಕ್ಷೆ ನಡೆಸಲು ನನ್ನ ತಕರಾರು ಇಲ್ಲ. ಕೆಎಟಿ ಆದೇಶ ಮಾಡಿದರೆ ಮರುಪರೀಕ್ಷೆ ನಡೆಸಲಾಗುತ್ತದೆ. ಇಲ್ಲದಿದ್ದರೆ ಸರ್ವಪಕ್ಷ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಕನ್ನಡದ ಅಭ್ಯರ್ಥಿಗಳಿಗೆ ಆಗುವ ಅನ್ಯಾಯ ನೋಡಿಕೊಂಡು ಸುಮ್ಮನೆ ಸಹಿಸಿಕೊಂಡು ಕೂರುವುದಿಲ್ಲ ಎಂದು ತಿಳಿಸಿದರು.
ಪೂರ್ವಭಾವಿ ಪರೀಕ್ಷೆ ಹಾಗೂ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಅದ್ವಾನಗಳಿಗೆ ಕಾರಣರಾದ ವಿಷಯತಜ್ಞರನ್ನು ಕಪ್ಪುಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಭಾಷಾಂತರಕಾರರ ಲೋಪವಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಕೆಪಿಎಸ್‌ಸಿಯಲ್ಲಿ 16 ಸದಸ್ಯರಿದ್ದು, ಅದನ್ನು ಕಡಿತಗೊಳಿಸುವುದು, ಸಿಬ್ಬಂದಿ ನೇಮಕ, ವರ್ಗಾವಣೆ ಇತ್ಯಾದಿಗಳ ವಿಚಾರಗಳ ಬಗ್ಗೆ ನಿಯಮಗಳಲ್ಲಿ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಯುಪಿಎಸ್‌ಸಿ ಮಾದರಿ ಉತ್ತಮವಾಗಿದೆ ಎಂಬ ಅಭಿಪ್ರಾಯ ಇರುವುದರಿಂದ ಯುಪಿಎಸ್‌ಸಿ ಮಾದರಿಯನ್ನು ಕೆಪಿಎಸ್‌ಸಿಯಲ್ಲಿ ಅನುಸರಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಇನ್ನು ಮುಂದೆ ಕನ್ನಡದಲ್ಲೇ ಪ್ರಶ್ನೆಪತ್ರಿಕೆ:
ಕೆಪಿಎಸ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಇನ್ನು ಮುಂದೆ ಕನ್ನಡದಲ್ಲೇ ಸಿದ್ಧಪಡಿಸಿ, ನಂತರ ಇಂಗ್ಲಿಷಿಗೆ ಭಾಷಾಂತರ ಮಾಡಬೇಕು ಎಂದು ಕೆಪಿಎಸ್‌ಸಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳು, ಸಾಹಿತಿಗಳು, ಕನ್ನಡಪರ ಸಂಘಟನೆಗಳು ಕನ್ನಡದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದ್ದರು.
ಪ್ರಶ್ನೆಗಳನ್ನು ತಯಾರಿಸುವ ಕರ್ನಾಟಕದ ಅಧ್ಯಾಪಕರುಗಳಿಗೆ ಕನ್ನಡ ಅನುವಾದ ಮಾಡಲಾಗದ ದುಃಸ್ಥಿತಿ ಇದೆ. ಹೀಗಾಗಿ, ಇಂಗ್ಲೀಷಿನಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ನಂತರ ಕನ್ನಡಕ್ಕೆ ಅನುವಾದ ಮಾಡಲಾಗುತ್ತಿದೆ ಎಂದು ಕೆಪಿಎಸ್‌ಸಿಯ ಅಧಿಕಾರಿಗಳು ತಿಳಿಸಿದ್ದಾಗಿ, ಮುಖ್ಯಮಂತ್ರಿಯವರು ಸದನಕ್ಕೆ ತಿಳಿಸಿದರು.
ಮರುಪರೀಕ್ಷೆಗೆ ವಿಪಕ್ಷಗಳ ಆಗ್ರಹ:
ಇದಕ್ಕೂ ಮೊದಲು, ಎರಡನೇ ಬಾರಿ ನಡೆಸಿದ ಪರೀಕ್ಷೆಯಲ್ಲೂ 70ಕ್ಕೂ ಹೆಚ್ಚು ತಪ್ಪುಗಳು ಆಗಿರುವುದರಿಂದ ಮರುಪರೀಕ್ಷೆ ನಡೆಸಲೇಬೇಕು. ಇಲ್ಲದಿದ್ದರೆ ಕನ್ನಡ ಮಾಧ್ಯಮ ಅಭ್ಯರ್ಥಿಗಳು, ಬಡವರು, ಗ್ರಾಮಾಂತರ ಪ್ರದೇಶಗಳ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ಆಗ್ರಹಿಸಿದರು.
ಮರುಪರೀಕ್ಷೆಗೆ ನನ್ನ ತಕರಾರು ಇಲ್ಲ. ನಾನು ಕನ್ನಡ ಮಾಧ್ಯಮ ಅಭ್ಯರ್ಥಿಗಳ ಪರವಾಗಿದ್ದೇನೆ. ಭಾಷಾಂತರದಲ್ಲಿ ತಪ್ಪಾದರೆ ಜನ ಕ್ಷಮಿಸುವುದಿಲ್ಲ. ಕೆಎಟಿ ಆದೇಶ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ.
ವಿಪಕ್ಷಗಳಿಗೆ ಸಭಾತ್ಯಾಗದ ಉಪಾಯ ತಿಳಿಸಿದ ಸ್ಪೀಕರ್ !
ವಿಧಾನಸಭೆಯಲ್ಲಿ ಕೆಪಿಎಸ್ಸಿ ಕುರಿತಂತೆ ಸಿದ್ದರಾಮಯ್ಯ ಉತ್ತರ ನೀಡಿದ ನಂತರ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ಸದಸ್ಯರು ಮತ್ತಷ್ಟು ಪ್ರಶ್ನೆ ಕೇಳಲು ಎದ್ದು ನಿಂತರು. ಹೀಗೆ ಸದಸ್ಯರೆಲ್ಲರೂ ಒಮ್ಮೆಲೇ ಎದ್ದು ನಿಂತಿದ್ದನ್ನು ನೋಡಿದ ಸ್ಪೀಕರ್ ಯು.ಟಿ.ಖಾದರ್, ಉತ್ತರದ ಬಗ್ಗೆ ಅಸಮಾಧಾನವಿದೆಯೇ?, ಸಭಾತ್ಯಾಗ ಮಾಡುತ್ತಿದ್ದೀರಾ? ಎಂದು ಕೇಳಿದರು.
ಅದಕ್ಕೆ ಆರ್. ಅಶೋಕ್, ನಾವು ಮುಖ್ಯಮಂತ್ರಿ ಬಳಿ ಪ್ರಶ್ನೆ ಕೇಳುವುದಕ್ಕೆ ಎದ್ದು ನಿಂತಿದ್ದೇವೆ. ಆದರೆ, ನೀವು ಸಭಾತ್ಯಾಗ ಮಾಡುವ ಮಾರ್ಗ ತೋರಿಸುತ್ತಿದ್ದೀರಲ್ಲಾ?. ಮುಖ್ಯಮಂತ್ರಿ ನೀಡಿದ ಉತ್ತರಕ್ಕೆ ನಾವು ತೃಪ್ತರಾಗಿದ್ದೇವೆ. ಒಂದು ವೇಳೆ ಮುಖ್ಯಮಂತ್ರಿ ಬೇರೆ ರೀತಿ ಉತ್ತರ ನೀಡಿದ್ದರೆ ಸಭಾತ್ಯಾಗ, ಧರಣಿ ಮಾಡುತ್ತಿದ್ದೆವು. ಆದರೆ, ನೀವು ಸಭಾತ್ಯಾಗ ಮಾಡಿ ಎಂದು ಪರೋಕ್ಷವಾಗಿ ಹೇಳುತ್ತಿರುವಂತಿದೆ ಎಂದು ಸ್ಪೀಕರ್ ಅವರನ್ನು ಕಿಚಾಯಿಸಿದರು.