ಲೋಕಸಭಾ ಕ್ಷೇತ್ರ ಮರುವಿಂಗಡಣೆಯಲ್ಲಿ ಕೇಂದ್ರ ನಡೆ ಖಂಡಿಸುತ್ತೇವೆ: ಸಿಎಂ ಸಿದ್ದರಾಮಯ್ಯ

| N/A | Published : Mar 13 2025, 01:45 AM IST / Updated: Mar 13 2025, 09:13 AM IST

Karnataka Chief Minister Siddaramaiah (File Photo/ANI)

ಸಾರಾಂಶ

ಲೋಕಸಭಾ ಕ್ಷೇತ್ರ ಮರುವಿಂಗಡಣೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ನಡೆಗಳನ್ನು ಮುಲಾಜಿಲ್ಲದೆ ಖಂಡಿಸುತ್ತೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

  ಬೆಂಗಳೂರು : ಲೋಕಸಭಾ ಕ್ಷೇತ್ರ ಮರುವಿಂಗಡಣೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ನಡೆಗಳನ್ನು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಹೋರಾಟಕ್ಕೂ ಬೆಂಬಲ ನೀಡುತ್ತೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧವಾಗಿ ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯುವ ಮೊದಲ ಸಭೆಗೆ ಆಗಮಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪತ್ರದ ಮೂಲಕ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದಾರೆ. ಬುಧವಾರ ಸ್ಟಾಲಿನ್‌ ಸಂಪುಟದ ಸಚಿವರಾದ ಕೆ.ಪೊನ್ನುಮುಡಿ ಹಾಗೂ ರಾಜ್ಯಸಭಾ ಸದಸ್ಯ ಎಂ.ಎಂ. ಅಬ್ದುಲ್ಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಸ್ಟಾಲಿನ್‌ ಅವರ ಪತ್ರವನ್ನು ನೀಡಿದರು. ಈ ವೇಳೆ, ಖುದ್ದು ಸ್ಟಾಲಿನ್‌ ಅವರೂ ದೂರವಾಣಿ ಮೂಲಕ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದು, ಸಭೆಗೆ ಆಹ್ವಾನ ನೀಡಿದರು ಎಂದು ತಿಳಿದು ಬಂದಿದೆ.

ಹೋರಾಟಕ್ಕೆ ಬೆಂಬಲ: ಸಿಎಂ

ಲೋಕಸಭೆ ಕ್ಷೇತ್ರ ಪುನರ್‌ವಿಂಗಡಣೆ ವೇಳೆ 1971ರ ಜನಗಣತಿ ಆಧಾರದ ಮೇಲೆ ವಿಂಗಡಣೆ ಮಾಡಬೇಕು. ಇಲ್ಲದಿದ್ದರೆ ಜನಸಂಖ್ಯೆ ನಿಯಂತ್ರಣ ಮಾಡಿರುವ ದಕ್ಷಿಣದ ರಾಜ್ಯಗಳ ಸಂಸತ್ ಸ್ಥಾನಗಳು ಕಡಿಮೆಯಾಗಲಿದ್ದು, ಲೋಕಸಭೆಯಲ್ಲಿ ಪ್ರಾತಿನಿಧ್ಯತೆ ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ರೂಪಿಸುತ್ತಿರುವ ಬಹುರಾಜ್ಯ ಒಕ್ಕೂಟಕ್ಕೆ ಸೇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಸಿದ್ದರಾಮಯ್ಯ, ‘ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ತಾವು ಮುಲಾಜಿಲ್ಲದೆ ಖಂಡಿಸುತ್ತೇವೆ’ ಎಂದು ಹೇಳಿದ್ದಾರೆ.

ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಇಂದು ನನ್ನನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ, ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಿದರು. ಸಚಿವರ ನಿಯೋಗದ ಭೇಟಿಗೂ ಮೊದಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜೊತೆ ದೂರವಾಣಿ ಮೂಲಕ ಮಾತನಾಡಿ, ಹೋರಾಟದ ಬಗ್ಗೆ ಚರ್ಚಿಸಿದೆ. ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ನನ್ನ ಬೆಂಬಲ ಸದಾ ಇರಲಿದೆ. ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ನಾವು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ತಮಿಳುನಾಡಿನಂತೆ ಕರ್ನಾಟಕ ಕೂಡ ಸಮಾನ ಅಭಿಪ್ರಾಯ ಹೊಂದಿದೆ ಎಂದು ತಿಳಿಸಿದ್ದಾರೆ.

ಸ್ಟಾಲಿನ್‌ ಪತ್ರದಲ್ಲೇನಿದೆ?:

ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆ ಮಾನದಂಡಗಳು ರಾಷ್ಟ್ರೀಯ ಕರ್ತವ್ಯಗಳನ್ನು ಪೂರೈಸಿದ ರಾಜ್ಯಗಳಿಗೆ ಶಿಕ್ಷೆ ಹಾಕುವ ನಿಟ್ಟಿನಲ್ಲಿದೆ. ಜನಸಂಖ್ಯೆ ನಿಯಂತ್ರಣ ಮಾಡಿರುವ ರಾಜ್ಯಗಳಿಗೆ ಇದರಿಂದ ದೊಡ್ಡ ಅನ್ಯಾಯ ಆಗಲಿದೆ. ಹೀಗಿದ್ದರೂ ರಾಜ್ಯಗಳ ಕಳವಳಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸ್ಪಷ್ಟತೆ ಅಥವಾ ಯಾವುದೇ ನಿರ್ದಿಷ್ಟ ಬದ್ಧತೆಯನ್ನು ಪ್ರದರ್ಶಿಸುತ್ತಿಲ್ಲ.

ಹೀಗಾಗಿ ಜಂಟಿ ಕ್ರಿಯಾ ಸಮಿತಿ (ಜೆಎಸಿ) ರೂಪಿಸಿದ್ದು, ಕೇಂದ್ರದ ಧೋರಣೆಯಿಂದ ಅನ್ಯಾಯಕ್ಕೆ ತುತ್ತಾಗುವ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ, ಪೂರ್ವ ಭಾರತದಿಂದ ಪಶ್ಚಿಮ ಬಂಗಾಳ, ಒಡಿಶಾ, ಉತ್ತರದಿಂದ ಪಂಜಾಬ್‌ ರಾಜ್ಯಗಳು ಸೇರಿ ನಿಮ್ಮ ಪಕ್ಷದಿಂದ ಒಬ್ಬ ಹಿರಿಯ ಪ್ರತಿನಿಧಿಯನ್ನು ಜೆಎಸಿಗೆ ನೇಮಿಸಿ ನಮ್ಮ ಒಗ್ಗಟ್ಟಿಗೆ ಸಹಕಾರ ನೀಡಬೇಕು.

ಅಲ್ಲದೆ, ಚೆನ್ನೈನಲ್ಲಿ ಮಾ.22 ರಂದು ಮೊದಲ ಸಭೆ ನಡೆಯಲಿದೆ. ಈ ವೇಳೆ ಭಾಗವಹಿಸಿ ಜನರ ಭವಿಷ್ಯವನ್ನು ಕಾಪಾಡಲು ಒಗ್ಗಟ್ಟಾಗಿ ನಿಲ್ಲೋಣ ಎಂದು ಸಿದ್ದರಾಮಯ್ಯ ಅವರಿಗೆ ಸ್ಟಾಲಿನ್‌ ಮನವಿ ಮಾಡಿದ್ದಾರೆ.