ಸಾಹಿತ್ಯದ ವಾತಾವರಣ ನಿರ್ಮಿಸಿದ ಕಸಾಪ: ಅಷ್ಪಾಕ್ ಶೇಖ್

| Published : Jul 06 2025, 01:48 AM IST

ಸಾರಾಂಶ

ದಾಂಡೇಲಿ ನಗರದ ಜನತಾ ವಿದ್ಯಾಲಯದ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಕನ್ನಡ ಭಾಷಾ ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಿತು.

ದಾಂಡೇಲಿ: ಉತ್ತರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತ ಹತ್ತು ಹಲವಾರು ವೈಶಿಷ್ಟ್ಯಪೂರ್ಣವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ತುಂಬ ಸಾಹಿತ್ಯದ ವಾತಾವರಣ ನಿರ್ಮಿಸಿದೆ ಎಂದು ದಾಂಡೇಲಿ ನಗರಸಭೆ ಅಧ್ಯಕ್ಷ ಅಷ್ಪಾಕ್ ಶೇಖ್ ನುಡಿದರು.

ಅವರು ದಾಂಡೇಲಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು, ಉಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಗರದ ಜನತಾ ವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಕನ್ನಡ ಭಾಷಾ ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ನಾಡಿನ ಪ್ರತಿಯೊಬ್ಬ ಪ್ರಜೆಯಲ್ಲೂ ಕನ್ನಡದ ಬಗ್ಗೆ ಅಭಿಮಾನದ ಜತೆಗೆ ಕಾಳಜಿ ಇರಬೇಕು. ನಮ್ಮ ತಾಯಿಯನ್ನು ಗೌರವಿಸುವ ಹಾಗೆ ನಮ್ಮ ಮಾತೃಭಾಷೆ ಗೌರವಿಸಬೇಕು ಎಂದರು.

ವೆಸ್ಟ್‌ಕೊಸ್ಟ್‌ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿರಂತರ ಕಾರ್ಯಕ್ರಮಗಳ ಬಗ್ಗೆ ಇಡೀ ಜಿಲ್ಲೆಯ ಜನ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಕನ್ನಡದ ಕಾರ್ಯಕ್ರಮಗಳಿಗೆ ಸದಾ ಸಹಾಯ ಮಾಡಲು ಸಿದ್ಧವಿದೆ ಎಂದರು.

ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಬಹುಭಾಷೆಯ ನೆಲವಾಗಿರುವ ದಾಂಡೇಲಿಯಲ್ಲಿ ಕನ್ನಡ ತನ್ನದೇ ಆದ ಮಹತ್ವ ಹೊಂದಿದೆ. ಇಲ್ಲಿಯ ಕನ್ನಡದ ಅಭಿಮಾನ ಮತ್ತು ಭಾಷಾ ಬಾಂಧವ್ಯ ಮಾದರಿಯಾದದ್ದು. ಸಾಹಿತ್ಯ ಪರಿಷತ್ತಿನ ಈ ಗೌರವ ಪ್ರತಿಯೊಬ್ಬ ಮಕ್ಕಳ ಬಾಳಿನಲ್ಲಿ ಕನ್ನಡದ ಹಿರಿಮೆ ಹೆಚ್ಚಿಸುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಕನ್ನಡ ಭಾಷಾ ವಿಷಯದಲ್ಲಿ ಸಾಧನೆ ಮಾಡಿದವರನ್ನು ಗೌರವಿಸುತ್ತೇವೆ ಎಂದ ಮಾತ್ರಕ್ಕೆ ನಾವು ಬೇರೆ ಭಾಷೆಯವರನ್ನು ವಿರೋಧಿಸುತ್ತೇವೆ ಎಂದಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಈ ವರ್ಷ ಕೂಡ ಜಿಲ್ಲೆಯಾದ್ಯಂತ ೮೨೫ ವಿದ್ಯಾರ್ಥಿಗಳನ್ನು ಯಾವುದೇ ಅನುದಾನವಿಲ್ಲದೆ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಗೌರವಿಸಲಾಗುತ್ತಿದೆ ಎಂದರು.

ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರಥ, ಬಿಜೆಪಿ ಅಧ್ಯಕ್ಷ ಬುದ್ದಿವಂತ ಗೌಡ ಪಾಟೀಲ್, ಕಸಾಪ ಜಿಲ್ಲಾ ಗೌರವ ಕೋಶ್ಯಾಧ್ಯಕ್ಷ ಮೂರ್ತುಜಸ ಹುಸೇನ್ ಆನೆಹೊಸೂರ್, ಜನತಾ ವಿದ್ಯಾಲಯ ಪ್ರೌಢಶಾಲಾ ವಿಭಾಗದ ಮುಖ್ಯಾಧ್ಯಾಪಕ ಎಂ.ಬಿ. ಅರವಳ್ಳಿ ಸಾಂದರ್ಭಿಕವಾಗಿ ಮಾತನಾಡಿದರು.

ಜನತಾ ವಿದ್ಯಾಲಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ ಕಾಮತ್, ನಗರಸಭಾ ಸದಸ್ಯ ಅನಿಲ್ ನಾಯ್ಕರ್ ಮುಂತಾದವರು ಉಪಸ್ಥಿತರಿದ್ದರು.

ಕಸಾಪ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರವೀಣ ನಾಯ್ಕ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಎನ್.ಆರ್. ನಾಯ್ಕ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಆಶಾ ದೇಶಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಪದಾಧಿಕಾರಿಗಳಾದ ನರೇಶ ನಾಯ್ಕ, ಸುರೇಶ್ ಪಾಲನಕರ್, ಕಲ್ಪನಾ ಪಾಟೀಲ್, ವೆಂಕಮ್ಮ ನಾಯಕ, ಸುರೇಶ್ ಕುರುಡೇಕರ್ ಮುಂತಾದವರು ಸಹಕರಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಆ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಕನ್ನಡ ಶಿಕ್ಷಕರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಕನ್ನಡದ ಶಾಲು, ಕನ್ನಡ ಇಂಗ್ಲಿಷ್ ಡಿಕ್ಷನರಿ ಹಾಗೂ ಅಭಿನವ ಪ್ರಕಾಶನದ ರಾಣಿ ಅಬ್ಬಕ್ಕ ದೇವಿ ಪುಸ್ತಕ, ನೋಟ್‌ಬುಕ್ ಹಾಗೂ ಫೈಲ್ ಮತ್ತು ಅಭಿನಂದನ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಜಿಲ್ಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ವಿತರಿಸಿದ ವೆಸ್ಟ್‌ಕೊಸ್ಟ್‌ ಪೇಪರ್ ಮಿಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೀಶ ತಿವಾರಿ ಅವರನ್ನು ಗೌರವಿಸಲಾಯಿತು.