ಇತಿಹಾಸವನ್ನು ಮರೆತವರು ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಹಿಂದಿನ ಹೋರಾಟ, ತ್ಯಾಗ ಮತ್ತು ಬಲಿದಾನಗಳನ್ನು ಅರಿತುಕೊಂಡಾಗ ಮಾತ್ರ ಮುಂದಿನ ಪೀಳಿಗೆಗೆ ದೇಶದ ಇತಿಹಾಸ ಹಾಗೂ ಪರಂಪರೆಯ ಮಹತ್ವ ತಿಳಿಯಲು ಸಾಧ್ಯ ಎಂದು ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕಿ ಎಚ್.ಆರ್. ನಳಿನಿ ಅಭಿಪ್ರಾಯಪಟ್ಟರು.
ಗೋಣಿಕೊಪ್ಪ: ಇತಿಹಾಸವನ್ನು ಮರೆತವರು ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಹಿಂದಿನ ಹೋರಾಟ, ತ್ಯಾಗ ಮತ್ತು ಬಲಿದಾನಗಳನ್ನು ಅರಿತುಕೊಂಡಾಗ ಮಾತ್ರ ಮುಂದಿನ ಪೀಳಿಗೆಗೆ ದೇಶದ ಇತಿಹಾಸ ಹಾಗೂ ಪರಂಪರೆಯ ಮಹತ್ವ ತಿಳಿಯಲು ಸಾಧ್ಯ ಎಂದು ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕಿ ಎಚ್.ಆರ್. ನಳಿನಿ ಅಭಿಪ್ರಾಯಪಟ್ಟರು.ಸಾಯಿ ಶಂಕರ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಯಿ ಶಂಕರ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ದಿ.ಕೈಬುಲಿರ ಬೋಪಯ್ಯ ದತ್ತಿನಿಧಿ ಮತ್ತು ದಿ. ಗಂಗಾಧರ್ ಶೆಟ್ ಸುಲೋಚನಾ ಬಾಯಿ ದತ್ತಿನಿಧಿ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಉಪನ್ಯಾಸ ನೀಡಿದರು.1837ರಲ್ಲಿ ಅಮರ ಸುಳ್ಯ ದಂಗೆ: ಬ್ರಿಟಿಷರ ಆಳ್ವಿಕೆಯಿಂದ ದೇಶವನ್ನು ಮುಕ್ತಗೊಳಿಸಲು ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. 1857ರ ಸಿಪಾಯಿ ದಂಗೆಗೂ ಎರಡು ದಶಕಗಳ ಮುನ್ನವೇ 1837ರಲ್ಲಿ ಅಮರ ಸುಳ್ಯ ದಂಗೆ ನಡೆದಿತ್ತು. ಆದರೆ, ಈ ಮಹತ್ವದ ಹೋರಾಟಕ್ಕೆ ಇತಿಹಾಸದಲ್ಲಿ ದೊರೆಯಬೇಕಾದಷ್ಟು ಮನ್ನಣೆ ಸಿಗದಿರುವುದು ವಿಷಾದನೀಯ ಎಂದರು.
ಕೊಡಗು ತನ್ನ ಅಸ್ತಿತ್ವ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಚ್ಚನ್ನು ಹೊತ್ತಿಸಿತ್ತು. ಈ ಹೋರಾಟದಲ್ಲಿ ಕೊಡಗಿನ ಗೌರಮ್ಮ ಸೇರಿದಂತೆ ಅನೇಕ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದರು. ಗಾಂಧೀಜಿಯವರ ವಿಚಾರಧಾರೆಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಿ ಕೊಡಗಿಗೆ ಭೇಟಿ ನೀಡಿದ ಬಳಿಕ ಇಲ್ಲಿನ ಸ್ವಾತಂತ್ರ್ಯ ಹೋರಾಟದ ಸ್ವರೂಪದಲ್ಲೂ ಬದಲಾವಣೆ ಕಂಡುಬಂದಿತ್ತು. ದೇಶಕ್ಕಾಗಿ ಹೋರಾಡಿದ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಇಂದಿನ ಪೀಳಿಗೆ ಸ್ಮರಿಸಬೇಕು ಎಂದು ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ತೆರಳಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದಿನಿಂದ ಈ ನೆಲದ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಪತ್ರಿಕೆ ಹಾಗೂ ಪುಸ್ತಕಗಳ ಓದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಆತ್ಮವಿಶ್ವಾಸ ತುಂಬುತ್ತದೆ. ಆದ್ದರಿಂದ ಮೊಬೈಲ್ ಮತ್ತು ದೂರದರ್ಶನದಿಂದ ದೂರವಿದ್ದು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಕೈಬುಲಿರ ಬೋಪಯ್ಯ ದತ್ತಿದಾನಿ ಕೈಬುಲಿರ ಪಾರ್ವತಿ ಬೋಪಯ್ಯ ಮಾತನಾಡಿ, ಕೇವಲ ಪದವಿ ಪಡೆಯುವ ಉದ್ದೇಶದಿಂದ ಓದದೆ, ಭವಿಷ್ಯವನ್ನು ರೂಪಿಸಿಕೊಳ್ಳುವ ದೃಷ್ಟಿಯಿಂದ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಕಳೆದುಹೋದ ಸಮಯ ಮತ್ತೆ ಮರಳುವುದಿಲ್ಲ. ನಿರಂತರ ಅಧ್ಯಯನದಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.ಸ್ವಾತಂತ್ರ್ಯಕ್ಕಾಗಿ ಆತ್ಮಹತ್ಯೆ: ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊನ್ನಂಪೇಟೆ ವ್ಯಾಪ್ತಿಯಲ್ಲಿಯೂ ಸ್ವಾತಂತ್ರ್ಯ ಹೋರಾಟದ ಕಿಚ್ಚು ವ್ಯಾಪಕವಾಗಿ ಹರಡಿತ್ತು. ಕೋಳೆರ ಕುಟುಂಬದ ಕಾವೇರಿ ಎಂಬ ಯುವತಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಆಸಕ್ತಿ ಹೊಂದಿದ್ದರೂ, ಕುಟುಂಬದವರು ಪ್ರೋತ್ಸಾಹ ನೀಡದ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ತ್ಯಾಗದ ಇತಿಹಾಸವನ್ನು ಈ ನೆಲ ಹೊಂದಿದೆ. ಪಾರುವಂಗಡ ಕುಶಲಪ್ಪ ಅವರು ಈ ಭಾಗದಲ್ಲಿ ಸ್ವದೇಶಿ ಚಳವಳಿಯನ್ನು ಸಂಘಟಿಸಿದ್ದರು ಎಂದು ತಿಳಿಸಿದರು.
ಸಾಯಿ ಶಂಕರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ಕಾರ್ಯಕ್ರಮ ಉದ್ಘಾಟಿಸಿದರು.ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಹುದಿಕೇರಿ ಹೋಬಳಿ ಅಧ್ಯಕ್ಷ ಬಾನಂಗಡ ಅರುಣ್, ಶ್ರೀಮಂಗಲ ಹೋಬಳಿ ಅಧ್ಯಕ್ಷೆ ಉಳುವಂಗಡ ಕಾವೇರಿ, ಸಾಯಿ ಶಂಕರ್ ವಿದ್ಯಾಸಂಸ್ಥೆಯ ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಪಿ.ಎ. ನಾರಾಯಣ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಸದಸ್ಯರಾದ ಬಿ.ಎನ್. ಪ್ರಕಾಶ್, ಚಂದನ್ ಕಾಮತ್, ರಾಮಕೃಷ್ಣ, ವಿನೋದ್ ಟಿ.ಆರ್. ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೈಬುಲಿರ ಬೋಪಯ್ಯ ದತ್ತಿನಿಧಿಯ ಆಶಯದಂತೆ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಎಚ್.ಕೆ. ನವ್ಯ ಅವರನ್ನು ಸನ್ಮಾನಿಸಲಾಯಿತು