ಕ್ಯಾಂಪೇನ್ ಸ್ಟೋರಿ-3
ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಜಾಸ್ತಿ । ಯೋಜನೆಯ ವಿರುದ್ಧ ಸ್ಥಳೀಯ ಜನರ ಆಕ್ರೋಶಪ್ರಸಾದ್ ನಗರೆ
ಕನ್ನಡಪ್ರಭ ವಾರ್ತೆ ಹೊನ್ನಾವರಉತ್ತರ ಕನ್ನಡ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ. ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿನ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದ ಹಲವು ಯೋಜನೆಗಳಿವೆ. ಇದರಲ್ಲಿ ಹೊನ್ನಾವರ ತಾಲೂಕಿನಲ್ಲಿ ನಿರ್ಮಾಣ ಮಾಡುತ್ತಿರುವ ಕಾಸರಕೋಡಿನ ಬಂದರು ಕೂಡ ಒಂದಾಗಿದೆ. ಮೀನುಗಾರರು ಹಾಗೂ ಉದ್ದೇಶಿತ ಬಂದರು ಸ್ಥಳದ ಸುತ್ತಮುತ್ತ ಇರುವವರು ನಿರಂತರ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ.
ಈ ಯೋಜನೆ ಅನುಷ್ಠಾನವಾಗುವ ಮೊದಲಿಂದಲೂ ಚರ್ಚೆ ಮತ್ತು ವಿವಾದಗಳು ಏಳುತ್ತಲೆ ಬಂದಿತ್ತು. ಸರ್ಕಾರ, ಸ್ಥಳೀಯ ಜನರು, ಮೀನುಗಾರರು ಮತ್ತು ಪರಿಸರವಾದಿಗಳು ಈ ಯೋಜನೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಲೇ ಬಂದಿದ್ದರು.
ಈ ಯೋಜನೆ ಇಲ್ಲಿನ ಪರಿಸರಕ್ಕೆ ಮಾರಕ ಎಂದು ಜನತೆ ಮತ್ತು ಮೀನುಗಾರರು ಧ್ವನಿ ಎತ್ತಿದರು. ಈ ಪ್ರದೇಶವು ಸಂವೇದನಾಶೀಲ ಪರಿಸರ ವಲಯ, ಜೀವವೈವಿಧ್ಯತೆ, ಮತ್ಸ್ಯ ಸಂಪತ್ತು, ಅರಣ್ಯ ವಲಯಕ್ಕೆ ಹಾನಿ ಉಂಟಾಗಲಿದೆ. ಅಲ್ಲದೆ ಮೀನುಗಾರರ ಜೀವನೋಪಾಯದ ಕಸುಬನ್ನು ಕಸಿದುಕೊಳ್ಳಲಿದೆ ಎಂಬ ಆತಂಕ ವ್ಯಕ್ತಪಡಿಸಲಾಗಿತ್ತು. ಸ್ಥಳೀಯ ನಿವಾಸಿಗಳಿಗೆ ಎಲ್ಲಿ ಪುನರ್ವಸತಿಯನ್ನು ಕಲ್ಪಿಸಿಕೊಡುತ್ತೀರಿ ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದರು. ಅಲ್ಲದೆ ಸತತ ಜನಾಂದೋಲನ ನಡೆಸಿದರು.
ಯೋಜನೆಯ ವಿವರ:ಶರಾವತಿ ಮತ್ತು ಅರಬ್ಬಿ ಸಮುದ್ರ ಸಂಗಮವಾದ ಕಾಸರಕೋಡನಲ್ಲಿ ಹೊನ್ನಾವರ ಪ್ರೈವೇಟ್ ಪೋರ್ಟ್ ಲಿಮಿಟೆಡ್ ಸಂಸ್ಥೆ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ 44 ಹೆಕ್ಟೇರ್ ಪ್ರದೇಶದಲ್ಲಿ ಬಂದರು ನಿರ್ಮಾಣ ಮಾಡುವುದು. ವಾರ್ಷಿಕ 4.9 ಟನ್ ಸರಕು ನಿರ್ವಹಣೆ ಮಾಡುವ, ಸುಮಾರು ₹600 ಕೋಟಿ ಅಂದಾಜು ವೆಚ್ಚದ ಯೋಜನೆ ಇದಾಗಿದೆ.
ಈ ಯೋಜನೆಯ ವಿರುದ್ಧ 2012ರಿಂದಲೇ ಮೀನುಗಾರ ಸಮುದಾಯವು ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದರ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಇದೆ.ಮೀನುಗಾರಿಕೆ ಮತ್ತು ಒಣಮೀನು ಉದ್ಯಮಕ್ಕೆ ನಷ್ಟ, ಸಮುದ್ರ ಜೀವವೈವಿಧ್ಯತೆ ಮತ್ತು ಆಲಿವ್ ರಿಡ್ಲೆ ಆಮೆಗಳಿಗೆ ಅಪಾಯ, ಭೂ ಸ್ವಾಧೀನ ಮತ್ತು ಸ್ಥಳಾಂತರ ಸಮಸ್ಯೆ, ಪಾರದರ್ಶಕತೆಯ ಕೊರತೆ ಇವೇ ಮುಂತಾದ ಗಂಭೀರ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ.
2021-22ರಲ್ಲಿ ಬಂದರು ಪ್ರದೇಶಕ್ಕೆ ರಸ್ತೆ ನಿರ್ಮಾಣ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆ ವೇಳೆ ಪೊಲೀಸರನ್ನು ಬಳಸಿಕೊಂಡು ಪ್ರತಿಭಟನೆಯಲ್ಲಿದ್ದ ಮಹಿಳೆಯರನ್ನು ಬಂಧಿಸಲಾಗಿತ್ತು. 2024-25ರಲ್ಲಿ ನೂರಾರು ಮೀನುಗಾರರು ಸಮುದ್ರಕ್ಕೆ ಇಳಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರನ್ನು ಬಂಧಿಸಿ, ಎಫ್ಐಆರ್ ಹಾಕಲಾಗಿತ್ತು. ಈಗಲೂ ಮೀನುಗಾರರು ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ.ಬಂದರು ನಿರ್ಮಾಣ ಬೇಡ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಉಸ್ತುವಾರಿ ಸಚಿವರು ಮೊದಲು ಇದನ್ನು ವಿರೋಧಿಸಿದ್ದರೂ ಬಳಿಕ ಇತ್ತ ಸುಳಿದಿಲ್ಲ.
ಅಲ್ಲಿನ ಕೆಲವು ಜನರು ಈಗಲೂ ಕೋರ್ಟು, ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಸ್ಥಳೀಯ ಮೀನುಗಾರರು ತಮ್ಮ ನೆಲೆಗಾಗಿ ಹೋರಾಟ ನಡೆಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ.ಈ ಬಂದರು ಯೋಜನೆ ಕೇವಲ ಮೀನುಗಾರರಿಗಷ್ಟೇ ಅಲ್ಲ, ಇಡೀ ಹೊನ್ನಾವರದ ಜನತೆಗೆ ಕಂಟಕವಾಗಿದೆ. ಒಗ್ಗಟ್ಟಿನಿಂದ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆಕರಾವಳಿ ಮೀನುಗಾರರ ಕಾರ್ಮಿಕ ಸಂಘದ ಮುಖಂಡ ರಾಜೇಶ ಜಿ.ತಾಂಡೇಲ್.