ಸಾರಾಂಶ
ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿದ್ದ ಆದೇಶವನ್ನು ರದ್ದುಪಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿದ್ದ ಆದೇಶವನ್ನು ರದ್ದುಪಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಎರಡು ವರ್ಷಗಳ ಅವಧಿಗೆ ಸಚಿವ ಸಂಪುಟ ಸ್ಥಾನಮಾನದೊಂದಿಗೆ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರಿಗೆ ಪತ್ರ ಬರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ಸಚಿವ ಸಂಪುಟ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸೂಚನೆ ನೀಡಿದ್ದರು.ಜ.26ರಂದು ರಾಜ್ಯ ಸರ್ಕಾರ 34 ಶಾಸಕರಿಗೆ ವಿವಿಧ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿದಾಗ ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ, ಕ್ರೀಡಾ ಪ್ರಾಧಿಕಾರದ ಬೈಲಾದಲ್ಲಿ ಇದಕ್ಕೆ ಅವಕಾಶವಿರಲಿಲ್ಲ. ಹೀಗಾಗಿ, ವಿಜಯಾನಂದ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಈ ಸೂಚನೆ ನೀಡಿದ್ದು, ಇದರ ಬೆನ್ನಲ್ಲೇ ವಿಜಯಾನಂದ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.