ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದ ಕಾಶಿಬಾಯಿ ಗೌಡತಿ

| Published : Aug 15 2024, 01:56 AM IST

ಸಾರಾಂಶ

ಸ್ವಾತಂತ್ರ್ಯ ಹೋರಾಟಕ್ಕಾಗಿ ಅದೆಷ್ಟೋ ಮಹಾತ್ಮರು ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಅದರಂತೆ ವಿಜಯಪುರ ಜಿಲ್ಲೆಯ ದೇಸಾಯಿ ಮನೆತನದ ದಿಟ್ಟ ಗೌಡತಿಯೊಬ್ಬಳು ಬ್ರಿಟಿಷ್ ಅಧಿಕಾರಿಗೆ ಸೆಡ್ಡು ಹೊಡೆದು ಐಶಾರಾಮಿ ಕಾರನ್ನು ಬೆರಣಿ ಹಚ್ಚಲು ಬಳಸುವ ಮೂಲಕ ಕೆಂಪು ಮುಸುಡಿಯ ಕೋತಿಗಳಿಗೆ ದಿಟ್ಟತನದ ಉತ್ತರ ಕೊಟ್ಟಿದ್ದಳು. ಇಂತಹ ಧೀರೆ ಕಾಶಿಬಾಯಿ ಗೌಡತಿ ಕುರಿತು ವಿಶೇಷ ವರದಿ ಇಲ್ಲಿದೆ ನೋಡಿ...

ಸ್ವಾತಂತ್ರ್ಯ ಹೋರಾಟಕ್ಕಾಗಿ ಅದೆಷ್ಟೋ ಮಹಾತ್ಮರು ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಅದರಂತೆ ವಿಜಯಪುರ ಜಿಲ್ಲೆಯ ದೇಸಾಯಿ ಮನೆತನದ ದಿಟ್ಟ ಗೌಡತಿಯೊಬ್ಬಳು ಬ್ರಿಟಿಷ್ ಅಧಿಕಾರಿಗೆ ಸೆಡ್ಡು ಹೊಡೆದು ಐಶಾರಾಮಿ ಕಾರನ್ನು ಬೆರಣಿ ಹಚ್ಚಲು ಬಳಸುವ ಮೂಲಕ ಕೆಂಪು ಮುಸುಡಿಯ ಕೋತಿಗಳಿಗೆ ದಿಟ್ಟತನದ ಉತ್ತರ ಕೊಟ್ಟಿದ್ದಳು. ಇಂತಹ ಧೀರೆ ಕಾಶಿಬಾಯಿ ಗೌಡತಿ ಕುರಿತು ವಿಶೇಷ ವರದಿ ಇಲ್ಲಿದೆ ನೋಡಿ...

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಸ್ವಾತಂತ್ರ್ಯಕ್ಕೂ ಮೊದಲೇ ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದಲ್ಲಿನ ದೇಸಾಯಿ ಮನೆತನದ ಒಡತಿ ಕಾಶಿಬಾಯಿ ದೇಸಾಯಿ ಎಂಬ ಗೌಡತಿ 1942ರಲ್ಲಿಯೇ ಬ್ರಿಟನ್ ದೇಶದ ರೋಲ್ಸ್ ರಾಯ್ಸ್ ಕಾರು ತರಿಸಿ ಐಶಾರಾಮಿ ಜೀವನ ನಡೆಸುತ್ತಿದ್ದಳು. ಒಮ್ಮೆ ಕಲ್ಕತ್ತಾದಿಂದ ಬಂದಿದ್ದ ಬ್ರಿಟಿಷ್ ಅಧಿಕಾರಿಗೆ ಸಂಚರಿಸಲು ನಿಮ್ಮ ಕಾರು ಕೊಡಿ ಎಂದು ಆಗಿನ ಬಿಜಾಪುರದ ಜಿಲ್ಲಾಧಿಕಾರಿ ಕೇಳಿದ್ದರಂತೆ. ನಾನು ಕಾರು ತಂದಿದ್ದು ನನ್ನ ಬಳಕೆಗೆ, ನಿಮ್ಮ ಬ್ರಿಟೀಷರ ಬಳಕೆಗಲ್ಲ. ಹಾಗಾಗಿ ನಾನು ಕೊಡುವುದಿಲ್ಲ ಎಂದು ಈ ವೇಳೆ ದಿಟ್ಟವಾಗಿ ಉತ್ತರಿಸಿದ್ದಳಂತೆ ಕಾಶಿಬಾಯಿ ಗೌಡತಿ. ಇದರಿಂದ ಕುಪಿತಗೊಂಡ ಡಿಸಿ ಕಾಶಿಬಾಯಿ ಅವರ ಕಾರಿನ ಪರವಾನಗಿಯನ್ನು ರದ್ದು ಮಾಡಿದ್ದರಂತೆ. ಆ ವೇಳೆ ನೀನು ರದ್ದು ಮಾಡಿದ್ದ ಕಾರಿಗೆ ನಾನು ದನಗಳ ಸೆಗಣಿಯಿಂದ ತಯಾರಾದ ಕುರುಳು(ಬೆರಣಿ) ಹಚ್ಚುತ್ತೇನೆ. ಆದರೆ, ಬ್ರಿಟಿಷರಿಗೆ ಮಾತ್ರ ಕೊಡುವುದಿಲ್ಲ ಎಂದು ತನ್ನ ಬೆಲೆಬಾಳುವ ಕಾರಿಗೆ ಬೆರಣಿ ಬಳಿಯಲು ಶುರು ಮಾಡಿ ತನ್ನ ಸ್ವಾಭಿಮಾನವನ್ನು ಮೆರೆದಿದ್ದಾಕೆ ಕಾಶಿಬಾಯಿ ದೇಸಾಯಿ.ಬ್ರಿಟಿಷರ ಹೆದರಿಕೆಗೆ ಬಗ್ಗಲಿಲ್ಲ ಗೌಡತಿ:

ಹೀಗೆ ಬ್ರಿಟಿಷರ ಮಾತಿಗೆ ಬಗ್ಗದ ಅವರು ತಾವು ರಾಯಲ್ ಜೀವನ ನಡೆಸಲೆಂದು ತಂದಿದ್ದ ರೋಲ್ಸ್ ರಾಯ್ಸ್ ಕಾರನ್ನೇ ಮೂಲೆಗೆ ತಳ್ಳಿದ್ದ ಇತಿಹಾಸವಿದೆ. 1958ರಲ್ಲಿ ಕಾಶಿಬಾಯಿ ನಿಧನವಾದ ಬಳಿಕ ಕಾಲಾನಂತರದಲ್ಲಿ ದೇಸಾಯಿ ಮನೆತನದ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿದ್ದರಿಂದ 1962ರಲ್ಲಿ ರೋಲ್ಸ್ ರಾಯ್ಸ್ ಕಾರನ್ನು ಸರ್ಕಾರ ಹರಾಜು ಹಾಕಿಬಿಟ್ಟಿದೆ. ಇನ್ನು ಇದಷ್ಟೆ ಅಲ್ಲದೆ ವಿಜಯಪುರದಲ್ಲಿ ಅವರು ನಿರ್ಮಿಸಿದ್ದ ಬೃಹತ್ ಬಂಗಲೆಗೆ(ವಾಡೆ) ವಿದೇಶದಿಂದ ತರಿಸಿದ್ದ ವಸ್ತುಗಳಿಂದ ನಿರ್ಮಿಸಿದ್ದಾರೆ ಈ ಕಾಶಿಬಾಯಿ. ಬಳಿಕ ಈ ಮನೆಗೆ ಲಕ್ಷ್ಮೀ ನಿವಾಸ ಎಂದು ಹೆಸರಿಟ್ಟಿದ್ರು. ಇದು ಕಾಶಿಬಾಯಿ ಗೌಡತಿಗೆ ಅತ್ಯಂತ ಇಷ್ಟವಾದ ಸ್ಥಳವಾಗಿತ್ತು. ವಿದೇಶಿ ಕಾರು, ವಾಡೆ ನೋಡಲು ಬರುತ್ತಿದ್ದರು ಜನರುಃ

ಗೌಡತಿ ಬಳಸುತ್ತಿದ್ದ ವಿದೇಶಿ ಕಾರು ನೋಡಲು ಅವರ ಕಾಲಾನಂತರದಲ್ಲಿ ಜನರು ಬರುತ್ತಿದ್ದರು. ಜೈನಾಪುರದಲ್ಲಿರುವ ದೇಸಾಯಿ ಮನೆತನದ ವಾಡೆ(ಬಂಗ್ಲೆ) ಹಲವು ವಿಶೇಷತೆಗಳನ್ನು ಹೊಂದಿದ್ದು, ಇದನ್ನು ನೋಡಲು ಜನರು ಎಲ್ಲೆಡೆಯಿಂದ ಆಗಮಿಸುತ್ತಿದ್ದರಂತೆ. ಇಷ್ಟೆಲ್ಲ ಇದ್ದ ಗೌಡತಿ ದೇಸ್ಗತಿ ಮನೆತನದ ಆಡಳಿತ ನಡೆಸುತ್ತಿದ್ದ ವೇಳೆ ಎಲ್ಲರಿಗೂ ನ್ಯಾಯ ಸಿಗುವಂತೆ ಪಂಚಾಯತಿ ನಡೆಸಿ ತೀರ್ಪು ನೀಡುವ ಮೂಲಕ ನ್ಯಾಯ ಒದಗಿಸುತ್ತಿದ್ದರಂತೆ. ಜೈನಾಪುರದ ಸುತ್ತಲೂ ಇರುವ 24 ಹಳ್ಳಿಗಳಿಗೆ ಕಾಶಿಬಾಯಿ ಗೌಡತಿಯ ಮಾತು ಎಂದ್ರೆ ವೇದವಾಕ್ಯ ಆಗಿತ್ತಂತೆ.ಮೂಲತಹ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಸೊನ್ನ ಗ್ರಾಮದ ದೇಸಾಯಿ ಕುಟುಂಬದ ಕಾಶಿಬಾಯಿ ಅವರನ್ನು ಜಿಲ್ಲೆಯ ಜೈನಾಪುರ ಗ್ರಾಮದ ದೇಸಾಯಿ ಮನೆತನದ ಸಂಗಪ್ಪ ದೇಸಾಯಿ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮುಂದೆ ಕೆಲವೇ ವರ್ಷಗಳಲ್ಲಿ ಪತಿ ಸಂಗಪ್ಪ ದೇಸಾಯಿ ತೀರಿಕೊಂಡ ಬಳಿಕ ಆಡಳಿತ ನಡೆಸಲು ಹೊರಬಿದ್ದವರೇ ಈ ಕಾಶಿಬಾಯಿ ಗೌಡತಿ. ಕಾಶಿಬಾಯಿ-ಸಂಗಪ್ಪ ದಂಪತಿಗೆ ಮಕ್ಕಳು ಇಲ್ಲವಾದ್ದ ಕಾಶಿಬಾಯಿ ಗೌಡತಿ 1958ರಲ್ಲಿ ನಿಧನ ಹೊಂದಿದರು. ಇದೀಗ ಇದೇ ಜೈನಾಪುರದಲ್ಲಿ ದೇಸಾಯಿ ಮನೆತನದ ಹತ್ತಾರು ಕುಟುಂಬಗಳು ನೆಲೆಸಿವೆ. ಕಾಶಿಬಾಯಿ ನಂತ್ರದಲ್ಲಿ ನಾಲ್ಕನೇ ತಲೆಮಾರು ನಡೆದುಕೊಂಡು ಬಂದಿದ್ದು, ಜೈನಾಪುರದಲ್ಲಿರುವ ದೇಸಾಯಿ ವಾಡೆ ಇಂದಿಗೂ ಇದೆ.ಮುಳುಗಡೆಯಲ್ಲಿರುವ ವಾಡೆ:

ಈ ವಾಡಿಯೂ ಸಹ ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಎರಡಂತಸ್ತು ಹೊಂದಿದೆ. ಬೃಹತ್ ಕಲ್ಲುಗಳಿಂದ ನಿರ್ಮಿತವಾದ ವಾಡೆಗೆ ಬಳಸಲಾಗಿರುವ ತೇಗದ ಕಟ್ಟಿಗೆ, ಉಕ್ಕು ಮಿಶ್ರಿತ ಕಬ್ಬಿಣದ ಗ್ರಿಲ್‌ಗಳು ಅದರಲ್ಲಿನ ಡಿಸೈನ್‌ಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ಕೃಷ್ಣಾ ನದಿಯ ನೀರಿನಿಂದ ಭಾದಿತವಾದ ಜೈನಾಪುರ ಗ್ರಾಮ ಮುಳುಗಡೆಯಾಗಿದ್ದು, ವಾಡೆ ಕೂಡ ಮುಳುಗಡೆ ಪ್ರದೇಶದಲ್ಲಿರುವುದರಿಂದ ದೇಸಾಯಿ ವಂಶಸ್ಥರು ಅದನ್ನು ಅಭಿವೃದ್ಧಿಪಡಿಸದೆ ಹಾಗೆಯೇ ಬಿಟ್ಟಿದ್ದಾರೆ. ಸ್ವಾತಂತ್ರ್ಯದ ಬಳಿಕ ಉಳುವವನೇ ಒಡೆಯ ಕಾಯ್ದೆ ಜಾರಿಗೆ ಬಂದ ಸಮಯದಲ್ಲಿ ಬರೋಬ್ಬರಿ 16 ಸಾವಿರ ಎಕರೆ ಭೂಮಿಯನ್ನು ಇದೇ ದೇಸಾಯಿ ಮನೆತನದವರು 14 ಹಳ್ಳಿಗಳ ಜನರಿಗೆ ಬಿಟ್ಟುಕೊಟ್ಟಿದ್ದಾರೆ.ತನಗೆಂದು ತಂದಿದ್ದ ಕಾರನ್ನು ಬ್ರಿಟಿಷರು ಕೇಳಿದಾಕ್ಷಣ ಅವರಿಗೆ ಬಿಟ್ಟು ಕೊಡದೆ ವಿದೇಶಿ ಕಾರಿಗೆ ಬೆರಣಿ ತಟ್ಟುವ ಮೂಲಕ ತನ್ನ ಸ್ವಾಭಿಮಾನವನ್ನು ಪ್ರದರ್ಶಿಸಿದ್ದ ಕಾಶಿಬಾಯಿ ದೇಸಾಯಿ ಅವರ ಕಿಚ್ಚನ್ನು ಸ್ವಾತಂತ್ರೋತ್ಸವದ ವೇಳೆ ನಾನು ನೆನೆಯಲೇಬೇಕು.