ಸಾರಾಂಶ
ಕಳೆದ ವರ್ಷ ನಡೆದ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ನಲ್ಲಿ ಹೊರಬಿದ್ದಿದ್ದ ಮಂಡ್ಯದ ಪ್ರತಿಭೆ ಕಶ್ವಿ ಸುನಿಲ್ ತರಬೇತುದಾರರಾದ ಮಂಜುನಾಥ್‌ರವರ ಕಠಿಣ ಪರಿಶ್ರಮದಿಂದ ಈ ಬಾರಿ ವಿಜಯ ಸಾಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಅಂತಾರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ ವತಿಯಿಂದ ತಮಿಳುನಾಡಿನ ಮಧುರೈ ನಗರದಲ್ಲಿ ಮಾ.೩ ರಿಂದ ಮಾ.೯ರವರೆಗೆ ನಡೆದ ಅಂತಾರಾಷ್ಟ್ರೀಯ ವರ್ಲ್ಡ್ ರ್‍ಯಾಂಕಿಂಗ್ ಪಂದ್ಯಾವಳಿಯಲ್ಲಿ ಮಂಡ್ಯದ ಕಶ್ವಿ ಸುನಿಲ್ ಪ್ರಥಮ ಸ್ಥಾನ ಪಡೆದಿದ್ದಾರೆ.ಮಾ.೯ರಂದು ನಡೆದ ಫೈನಲ್ ಪಂದ್ಯಾವಳಿಯಲ್ಲಿ ಭಾರತದವರೇ ಆದ ಹರ್ಷಿಣಿ ನಾಗರಾಜ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮೂರು ಸುತ್ತುಗಳಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪ್ರಥಮ ಸುತ್ತಿನಲ್ಲಿ ೫-೭ರಲ್ಲಿ ಹಿನ್ನಡೆ ಕಂಡ ಕಶ್ವಿ ಸುನಿಲ್ ಎರಡು ಮತ್ತು ಮೂರನೇ ಸುತ್ತಿನಲ್ಲಿ ಕ್ರಮವಾಗಿ ೭-೫, ೬-೩ ಸೆಟ್‌ಗಳಿಂದ ಗೆಲುವು ಸಾಧಿಸಿದರು.
ಕಳೆದ ವರ್ಷ ನಡೆದ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ನಲ್ಲಿ ಹೊರಬಿದ್ದಿದ್ದ ಮಂಡ್ಯದ ಪ್ರತಿಭೆ ಕಶ್ವಿ ಸುನಿಲ್ ತರಬೇತುದಾರರಾದ ಮಂಜುನಾಥ್‌ರವರ ಕಠಿಣ ಪರಿಶ್ರಮದಿಂದ ಈ ಬಾರಿ ವಿಜಯ ಸಾಧಿಸಿದ್ದಾರೆ.ಪಂದ್ಯಾವಳಿಯ ಪ್ರಥಮ ಸುತ್ತಿನಲ್ಲಿ ಶೈನಿ ಗೌರವ್ ದಲಾಲ್ ವಿರುದ್ಧ ೭-೫, ೬-೩ರಲ್ಲಿ ಗೆದ್ದು, ಎರಡನೇ ಸುತ್ತಿನಲ್ಲಿ ಧನಶ್ರೀ ಪಾಟೀಲ್‌ರನ್ನು ೬-೧, ೬-೨ರಲ್ಲಿ ಮಣಿಸಿ ಕ್ವಾರ್ಟರ್ ಫೈನಲ್‌ನಲ್ಲಿ ಅಸ್ಮಿ ಆಡ್ಕರ್ ಅವರನ್ನು ೬-೧, ೬-೧ರಿಂದ ಪರಾಭವಗೊಳಿಸಿ ಸೆಮಿಫೈನಲ್‌ನಲ್ಲಿ ಮೇಘನಾರನ್ನು ೬-೨, ೬-೩ರಲ್ಲಿ ಹಿಮ್ಮೆಟ್ಟಿಸಿ ಫೈನಲ್ ಪ್ರವೇಶಿಸಿದ್ದರು.
ಈ ಗೆಲುವಿನೊಂದಿಗೆ ಜೂನಿಯರ್ ವರ್ಲ್ಡ್ ರ್‍ಯಾಂಕಿಂಗ್‌ನಲ್ಲಿ ೮೭೧ನೇ ಸ್ಥಾನ ಪಡೆದಿರುವ ಕಶ್ವಿ ಸುನಿಲ್ ಅವರಿಗೆ ಮಂಡ್ಯ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ದಯಾನಂದ್, ಮಂಡ್ಯದ ಗ್ಲೋಬಲ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.ಕಶ್ವಿ ಸುನಿಲ್ ಅವರು ಮಂಡ್ಯ ಪಿಇಟಿ ಟೆನ್ನಿಸ್ ಸ್ಟೇಡಿಯಂನ ಟಾಪ್ ಸರ್ವ್ ಟೆನ್ನಿಸ್ ಅಕಾಡೆಮಿಯ ಮಂಜುನಾಥ್ ಅವರ ಬಳಿ ಎಂಟು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ.