ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
23 ವರ್ಷಗಳ ನಂತರವೂ ಎಸ್.ಆರ್. ಕಾಶಪ್ಪನವರ ಹೆಸರು ಜನಮಾನಸದಲ್ಲಿ ಚಿರಸ್ತಾಯಿಯಾಗಿ ಉಳಿದಿದೆ ಎಂದರೆ ಅವರು ತಮ್ಮ ಅವಧಿಯಲ್ಲಿ ಮಾಡಿದ ಜನಪರ ಕಾರ್ಯಗಳು ಮತ್ತು ದಿಟ್ಟ ನಿರ್ಧಾರ ಕಾರಣ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಹಾವರಗಿ ಗ್ರಾಮದಲ್ಲಿ ಸೋಮವಾರ ನಡೆದ ದಿ.ಎಸ್.ಆರ್.ಕಾಶಪ್ಪನವರ 23ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಎಸ್.ಆರ್.ಕಾಶಪ್ಪನವರ ಧರ್ಮ, ಗುರು ಪರಂಪರೆಯನ್ನು ಗೌರವ ಭಾವನೆಯಿಂದ ಕಾಣುತ್ತಿದ್ದರು. ಪಂಚಪೀಠಗಳಿಗೆ ಅವರ ಉಪಕಾರ ದೊಡ್ಡದು ಎಂದು ಹೇಳಿದರು.
ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಿ.ಎಸ್.ಆರ್.ಕಾಶಪ್ಪನವರ ಅವರು ಧರ್ಮ, ಶೈಕ್ಷಣಿಕವಾಗಿ ಅದ್ಭುತ ತಳಹದಿ ಹಾಕಿದ್ದಾರೆ. ಅವರು ಕಾಯಕದ ಕೀರ್ತಿ ಅಳಿಯದಂತೆ ಮಾಡಿದರು. ಪಂಚಪೀಠಗಳಲ್ಲಿ ಅವರ ನಂಬಿಕೆ, ವಿಶ್ವಾಸ ಸ್ಮರಣೀಯವಾದದ್ದು, ಅವರು ಕೂಡಲಸಂಗಮದಲ್ಲಿ ಆಯೋಜಿಸಿದ್ದ ಪಂಚಪೀಠಾಧೀಶ್ವರ ಉತ್ಸವ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕಾರ್ಯ. ಅಂತಹ ಕಾರ್ಯ ಮತ್ತೆ ಆಗಿಲ್ಲ. ವಿಜಯಾನಂದ ಅಂತಹ ಕಾರ್ಯ ನೆರವೇರಿಸುವಂತಾಗಲಿ ಎಂದು ಆಶಿಸಿದರು.ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಸ್.ಆರ್. ಕಾಶಪ್ಪನವರ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮಾರ್ಗದಲ್ಲಿ ಅವರ ಕುಟುಂಬ ಬೇರೆ ಬೇರೆ ಸೇವೆ ಮಾಡುತ್ತಿದೆ. ಅದು ಮುಂದುವರೆಯಲಿ ಎಂದು ಆಶೀರ್ವದಿಸಿದರು.
ನಂದವಾಡಗಿ ಆಳಂದದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸಾಹಿತಿ ಎಸ್.ಕೆ. ಕೊನೆಸಾಗರ, ವಿಜಯ ಗದ್ದನಕೇರಿ, ಮಹಾಂತೇಶ ಅವಾರಿ ಎಸ್.ಆರ್.ಕಾಶಪ್ಪನವರ ಕುರಿತಾಗಿ ಅಭಿಪ್ರಾಯ ಹಂಚಿಕೊಂಡರು.ದಿಂಡವಾರ ಕುಮಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಹಡಗಲಿ ನಿಡಗುಂದಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಿಲ್ ಕೆರೂರ್ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮುತ್ತತ್ತಿ ಗುರಲಿಂಗ ಶಿವಾಚಾರ್ಯ ಸ್ವಾಮೀಜಿ, ಚಳಗೇರಿ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಗಿರಿಸಾಗರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಂಗಡಗಿ ಅನ್ನದಾನಿ ಭಾರತಿ ಸ್ವಾಮೀಜಿ, ಪುರಗೇರಿ ಹಿರೇಮಠದ ಶಿವಸಂಗಮೇಶ್ವರ ದೇವರು, ಹುನಗುಂದ ಗಚ್ಚಿನ ಮಠದ ಅಮರೇಶ್ವರ ದೇವರು, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಎಸ್.ಆರ್. ಕಾಶಪ್ಪನವರ ಪ್ರತಿಷ್ಠಾನದ ಖಜಾಂಚಿ ದೇವಾನಂದ ಕಾಶಪ್ಪನವರ, ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಶಿರೂರು ಹಾಗೂ ಇತರರಿದ್ದರು.
ಹುನಗುಂದ ಮತಕ್ಷೇತ್ರದಲ್ಲಿ ನಮ್ಮ ತಂದೆಯವರು ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ನಿರ್ಭೀತ ನಿಲುವಿನ ನಿರ್ಧಾರಗಳು ನನ್ನ ರಾಜಕೀಯ ಜೀವನಕ್ಕೆ ಪ್ರೇರಕ. ಪಂಚಪೀಠದ ಜಗದ್ಗುರುಗಳು ಹಾಗೂ ಹರ ಗುರು ಚರಮೂರ್ತಿಗಳ ಮಾರ್ಗದರ್ಶನ ಹಾಗೂ ಆಶೀರ್ವಾದ ಬಲ ನಮ್ಮ ಕುಟುಂಬದ ಮೇಲೆ ಸದಾ ಇರುತ್ತದೆ. ನನ್ನ ಕೊನೆ ಉಸಿರಿರುವವರೆಗೂ ಎಸ್.ಆರ್.ಕೆ. ಪ್ರತಿಷ್ಠಾನದ ಅಡಿಯಲ್ಲಿ ತಂದೆಯವರ ಪುಣ್ಯ ಸ್ಮರಣೆಯ ಸಾರ್ವಜನಿಕ ಕಾರ್ಯಕ್ರಮ ಮುಂದುವರೆಯುತ್ತದೆ.- ವಿಜಯಾನಂದ ಕಾಶಪ್ಪನವರ, ಶಾಸಕರು
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನ ಬರಲು ವಿಜಯಾನಂದ ಕಾಶಪ್ಪನವರ ಕಾರಣ. ಅವರಿಗೆ ಮುಂಬರುವ ದಿನಗಳಲ್ಲಿ ಸಚಿವರನ್ನಾಗಿ ಮಾಡಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.-ಯೋಗಿ ಕಲ್ಲಿನಾಥ ದೇವರು ದಿಗಂಬರೇಶ್ವರ ಸಂಸ್ಥಾನ ಮಠ ಕೊಲ್ಹಾರ