ಕಸ್ತೂರಿ ರಂಗನ್ ವರದಿ ಸಂಬಂಧ ಕೇಂದ್ರ ಸರ್ಕಾರ ೭ನೇ ಕರಡು ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದ್ದು, ಪ್ರತಿ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ ಆಕ್ಷೇಪಣೆ ಸಲ್ಲಿಸಬೇಕು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ. ಸುರೇಶ್ ಮನವಿ ಮಾಡಿದ್ದಾರೆ.

ಸೋಮವಾರಪೇಟೆ: ಕಸ್ತೂರಿ ರಂಗನ್ ವರದಿ ಸಂಬಂಧ ಕೇಂದ್ರ ಸರ್ಕಾರ ೭ನೇ ಕರಡು ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದ್ದು, ಪ್ರತಿ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ ಆಕ್ಷೇಪಣೆ ಸಲ್ಲಿಸಬೇಕು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ. ಸುರೇಶ್ ಮನವಿ ಮಾಡಿದ್ದಾರೆ.

ಕೊಡಗು ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವುದರೊಂದಿಗೆ ಪುಟ್ಟ ಜಿಲ್ಲೆಯಾಗಿದ್ದು, ಸೂಕ್ಷ್ಮ ಪರಿಸರ ವಲಯಕ್ಕೆ ಸಂಬಂಧಪಟ್ಟಂತೆ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಕೊಡಗಿನ ಬಹುತೇಕ ಗ್ರಾಮಗಳು ಮೀಸಲು ಅರಣ್ಯಗಳಾಗಿ ಪರಿವರ್ತನೆಯಾಗಿ ಜಿಲ್ಲೆಯ ಮೂಲ ನಿವಾಸಿಗಳು ಪ್ರಾಣಿಗಳಂತೆ ಬದುಕಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಂಚಾಯಿತಿ ಪಿಡಿಒಗಳು ಗ್ರಾಮ ಸಭೆಗಳನ್ನು ಕರೆದು, ಗ್ರಾಮಸ್ಥರ ಅಕ್ಷೇಪಣೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಈ ಬಗ್ಗೆ ಶಾಸಕರು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಪ್ರಕಟಿಸಿರುವ ಹೊಸ ಕರಡು ಸೂಚನೆಯಲ್ಲಿ ಕೊಡಗು ಜಿಲ್ಲೆಯ ೫೩ ಗ್ರಾಮಗಳು ಸೇರಿವೆ. ಪ್ರತಿ ಮೀಸಲು ಅರಣ್ಯದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸೂಕ್ಷ್ಮಪರಿಸರ ವಲಯ ಇರಲಿದ್ದು, ಜಿಲ್ಲೆಯ ಬಹುತೇಕ ಗ್ರಾಮಗಳು ವ್ಯಾಪ್ತಿಗೆ ಸೇರಲಿವೆ. ಇವತ್ತು ಕೊಡಗಿನ ಜನರು ಆಕ್ಷೇಪಣೆ ಸಲ್ಲಿಸದಿದ್ದರೆ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಮೂರು ರಾಜಕೀಯ ಪಕ್ಷಗಳ ನಾಯಕರು ರೈತರ ಹೋರಾಟದಲ್ಲಿ ಭಾಗವಹಿಸಿಬೇಕು. ಪ್ರತಿ ಗ್ರಾಮಗಳಿಗೆ ತೆರಳಿ ವರದಿ ಅನುಷ್ಠಾನಕ್ಕೆ ಆಕ್ಷೇಪ ಸಲ್ಲಿಸುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ವರದಿ ಅನುಷ್ಠಾನಕ್ಕೆ ಅಕ್ಷೇಪಣೆ ಸಲ್ಲಿಸಲು ಇನ್ನು ಕೇವಲ ೫೨ ದಿನಗಳು ಬಾಕಿ ಉಳಿದಿವೆ ಎಂದು ಹೇಳಿದರು.

ಸಿ ಆ್ಯಂಡ್ ಡಿ ಜಾಗದ ಸಮಸ್ಯೆಯನ್ನು ಈ ಹಿಂದೆ ಗ್ರಾಮೀಣ ಜನರು ನಿರ್ಲಕ್ಷ್ಯ ಮಾಡಿದ ಪರಿಣಾಮ ಇವತ್ತು ರೈತರು ಆಸ್ತಿ ಕಳೆದುಕೊಳ್ಳುವ ಸಂಕಷ್ಟದಲ್ಲಿದ್ದಾರೆ. ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಸರ್ವಸ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಸ್. ನಾಗರಾಜು, ಹೋರಾಟ ಸಮಿತಿಯ ಪ್ರಮುಖ ಮಣಿ ಕುಶಾಲಪ್ಪ ಇದ್ದರು.