ಕನ್ನಡಪ್ರಭವಾರ್ತೆ, ಚನ್ನರಾಯಪಟ್ಟಣ

ನೇಕಾರರ ಸಂತ, ಆದ್ಯ ವಚನಕಾರ ದೇವರದಾಸಿಮಯ್ಯ ಜಯಂತಿಯನ್ನು ತಾಲೂಕು ಆಡಳಿತ ಕಾಟಾಚಾರಕ್ಕೆ ನಡೆಸಿರುವುದಕ್ಕೆ ನೇಕಾರ ಸಮುದಾಯಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ತಾಲೂಕು ನೇಕಾರ ಸಮುದಾಯದ ಮುಖಂಡ ಕೃಷ್ಣಶೆಟ್ಟಿ ಮಾತನಾಡಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಹಾಗೂ ತಹಸೀಲ್ದಾರ್ ಶಂಕರಪ್ಪ ಅವರು ಸಮುದಾಯದ ಮುಖಂಡರಿಗೆ ಮಾಹಿತಿ ನೀಡದೆ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡದೆ ಸಂತರಿಗೆ ಅವಮಾನ ಮಾಡಿದೆ. ತಾಲೂಕಿನಲ್ಲಿ ಸರಿ ಸುಮಾರು ೧೫ ಸಾವಿರ ನೇಕಾರರ ಜನಾಂಗದವರಿದ್ದಾರೆ. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪ್ರತಿ ಮಹನೀಯರ ಜಯಂತಿ ಆಚರಿಸಲಾಗುತ್ತದೆ. ಆದರೆ ಸೋಮವಾರ ನಡೆದ ದೇವರ ದಾಸಿಮಯ್ಯ ಜಯಂತಿಗೆ ನೇಕಾರ ಸಮುದಾಯ ಮುಖಂಡರನ್ನು ಕರೆಯದೆ ತಾಲೂಕು ದಂಡಾಧಿಕಾರಿ ಹಾಗೂ ಶಾಸಕರಷ್ಟೇ ಸೇರಿ ಆಚರಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ. ಇದರ ಹಿಂದೆ ರಾಜಕೀಯದವರ ಕುಮ್ಮಕ್ಕು ಇದೆಯೇ ಅಥವಾ ಜನಪ್ರತಿನಿಧಿಗಳ ಪಾತ್ರವಿದೆಯೇ ಎಂಬುದು ಗೊತ್ತಾಗಬೇಕಿದೆ ಎಂದು ಅವರು ಹೇಳಿದರು.ರಾಜ್ಯ ಸರ್ಕಾರ ಪ್ರತಿ ಜಯಂತಿಗೆ ಹಣ ನಿಗದಿ ಮಾಡದೆ. ಸಮುದಾಯದವರನ್ನು ಕರೆದರೆ ಹಣ ಖರ್ಚಾಗುತ್ತದೆ ಎಂಬ ಉದ್ದೇಶದಿಂದ ಆಹ್ವಾನ ಪತ್ರಿಕೆ ಮಾಡಿಸದೆ, ಬ್ಯಾನರ್‌, ಮೈಕ್ ಇಲ್ಲದೆ ಕಾರ್ಯಕ್ರಮ ಮಾಡಿರುವುದು ತಾಲೂಕಿನ ನೇಕಾರ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.