ಕಡತೋಕಾ ಮಂಜುನಾಥ ಭಾಗವತರ ನೆನಪಿನಲ್ಲಿ ನವೆಂಬರ್ ೨೩ರಿಂದ ಕಡತೋಕಾದಲ್ಲಿ ಯಕ್ಷರಂಗೋತ್ಸವ

| Published : Nov 21 2024, 01:05 AM IST

ಕಡತೋಕಾ ಮಂಜುನಾಥ ಭಾಗವತರ ನೆನಪಿನಲ್ಲಿ ನವೆಂಬರ್ ೨೩ರಿಂದ ಕಡತೋಕಾದಲ್ಲಿ ಯಕ್ಷರಂಗೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷರಂಗೋತ್ಸವವನ್ನು ನ. ೨೩ರಂದು ಸಂಜೆ ೪ ಗಂಟೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಜಂಟಿಯಾಗಿ ಉದ್ಘಾಟಿಸಲಿದ್ದಾರೆ.

ಹೊನ್ನಾವರ: ಯಕ್ಷಗಾನದ ತೆಂಕು- ಬಡಗು ತಿಟ್ಟಿನ ಅಗ್ರಮಾನ್ಯ ಭಾಗವತರಾಗಿದ್ದ ದಿ. ಕಡತೋಕಾ ಮಂಜುನಾಥ ಭಾಗವತರ ನೆನಪಿನ ಯಕ್ಷರಂಗೋತ್ಸವ ನ. ೨೩ ಮತ್ತು ೨೪ ಎರಡು ದಿನ ತಾಲೂಕಿನ ಕಡತೋಕಾದ ಜನತಾ ವಿದ್ಯಾಲಯದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು ಸಂಘಟನಾ ಸಮಿತಿ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಳದೀಪುರದ ಯಕ್ಷಲೋಕ ಸಂಸ್ಥೆಯು ಈ ಯಕ್ಷರಂಗೋತ್ಸವವನ್ನು ಕಳೆದ ಹನ್ನೆರಡು ವರ್ಷಗಳಿಂದ ಆಯೋಜಿಸುತ್ತಾ ಬಂದಿದೆ.‌ ಯಕ್ಷಂಗೋತ್ಸವವು ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆ ಯಕ್ಷರಂಗದ ಸಂಯೋಜನೆಯಲ್ಲಿ ಹಳದೀಪುರ, ಕುಮಟಾ, ಕಡತೋಕಾಗಳಲ್ಲಿ ನಡೆದಿದೆ ಎಂದರು.

ಯಕ್ಷರಂಗೋತ್ಸವವನ್ನು ನ. ೨೩ರಂದು ಸಂಜೆ ೪ ಗಂಟೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಸುನಿಲ್ ನಾಯ್ಕ, ನಿವೃತ್ತ ಪ್ರಾಂಶುಪಾಲ ಮತ್ತು ಸಂಗೀತಗಾರರಾದ ಪ್ರೊ. ಎಸ್. ಶಂಭು ಭಟ್, ಶಿರಸಿಯ ಉದ್ಯಮಿ ಅನಂತಮೂರ್ತಿ ಹೆಗಡೆ, ಯಕ್ಷಗಾನದ ಹಿರಿಯ ಸಂಶೋಧಕಿ ಡಾ. ವಿಜಯನಳಿನಿ ರಮೇಶ್, ಆರ್‌ಜಿಪಿಆರ್‌ಎಸ್‌ನ ಜಿಲ್ಲಾ ಸಂಚಾಲಕ ವಿನೋದ ನಾಯ್ಕ ಕರ್ಕಿ, ಕಡ್ಲೆ ಗ್ರಾಪಂ ಅಧ್ಯಕ್ಷ ಗೋವಿಂದ ಗೌಡ ಹಾಗೂ ಜನತಾ ವಿದ್ಯಾಲಯದ ಪ್ರಾಂಶುಪಾಲರಾದ ದುರ್ಗಮ್ಮ ಪಿ.ಎಚ್. ಅವರು ಭಾಗವಹಿಸಲಿದ್ದಾರೆ ಎಂದರು.

ಯಕ್ಷಗಾನದ ವೇಷಭೂಷಣ ತಜ್ಞ ಲಕ್ಷ್ಮಣ ನಾಯ್ಕ ಮಂಕಿ ಹಾಗೂ ಹಿರಿಯ ಪತ್ರಕರ್ತ ಗಣಪತಿ ಶಿರಳಗಿ ಅವರನ್ನು ಕಡತೋಕಾ ಕೃತಿ ಸ್ಮೃತಿ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಕಾರ್ತವೀರ್ಯಾಜುನ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.

ನ. 24ರಂದು ಬೆಳಗ್ಗೆ ೧೦ ಗಂಟೆಗೆ ತಾಳಮದ್ದಳೆ ಅರ್ಥಗಾರಿಕೆಯ ಕುರಿತು ವಿನೂತನವಾದ ಚಿಂತನ ಕಮ್ಮಟ ನಡೆಯಲಿದೆ. ತಾಳಮದ್ದಳೆ ಅರ್ಥಚಿಂತನ ಕಮ್ಮಟ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ಕಮ್ಮಟವನ್ನು ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಉದ್ಘಾಟಿಸುವರು.

ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆಯಲ್ಲಿ ನಡೆಯುವ ಕಮ್ಮಟದಲ್ಲಿ ಖ್ಯಾತ ಅರ್ಥಧಾರಿಗಳಾದ ನಾರಾಯಣ ಯಾಜಿ ಸಾಲೆಬೈಲು, ಹಿರಣ್ಯ ವೆಂಕಟೇಶ ಭಟ್, ವಾಸುದೇವ ರಂಗಾಭಟ್ ಹಾಗೂ ಮೋಹನ ಹೆಗಡೆ ಹೆರವಟ್ಟಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 3 ಗಂಟೆಗೆ ವಿದ್ಯಾವಾಚಸ್ಪತಿ ಬಿರುದಾಂಕಿತ ಖ್ಯಾತ ಅರ್ಥಧಾರಿ ವಿದ್ವಾನ್ ಉಮಾಕಾಂತ ಭಟ್ ಕೆರೆಕೈ ಅವರು ತಾಳಮದ್ದಳೆಯಲ್ಲಿ ಪಾತ್ರಶಿಲ್ಪ ಎಂಬ ವಿಷಯದ ಮೇಲೆ ಉಪನ್ಯಾಸವನ್ನು ಮಂಡಿಸುವರು. ಸಮಾರೋಪ ಸಮಾರಂಭ ಯಕ್ಷರಂಗೋತ್ಸವ ಸಂಘಟನಾ ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ಮದ್ದಳೆಗಾರ ಚಂದ್ರಶೇಖರ ಭಂಡಾರಿ ಕಡತೋಕಾ ಹಾಗೂ ಹಿರಿಯ ವೇಷಧಾರಿ ಪ್ರಭಾಕರ ಹೆಗಡೆ ಚಿಟ್ಟಾಣಿ ಅವರಿಗೆ ಕಡತೋಕಾ ಕೃತಿ- ಸ್ಮೃತಿ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು.

ಉತ್ಸವದ ಕೊನೆಯಲ್ಲಿ ಪ್ರಸಿದ್ಧ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ, ವಿದ್ವಾನ್ ಉಮಾಕಾಂತ ಭಟ್ ಕೆರೆಕೈ, ಹಿರಣ್ಯ ವೆಂಕಟೇಶ ಭಟ್ ಹಾಗೂ ವಾಸುದೇವ ರಂಗಾ ಭಟ್ ಅವರು ಅರ್ಥಧಾರಿಗಳಾಗಿ ವಾಮನ ಚರಿತ್ರೆ ಎಂಬ ತಾಳಮದ್ದಳೆಯನ್ನು ನಡೆಸಿಕೊಡುವರು ಎಂದು ನ್ಯಾಯವಾದಿ ಸತೀಶ ಭಟ್ ಮಾಹಿತಿ‌ ನೀಡಿದರು.ಯಕ್ಷರಂಗದ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತ, ನಾರಾಯಣ ಹೆಗಡೆ ನವಿಲಗೋಣ ಉಪಸ್ಥಿತರಿದ್ದರು.