ಕೋಟೆ ಕೆರೆ ಸುತ್ತ ಸ್ವಚ್ಛತೆ, ನಿಗಾವಹಿಸಲು ಕಟಾರಿಯಾ ಸೂಚನೆ

| Published : Jul 14 2024, 01:31 AM IST

ಸಾರಾಂಶ

ಚಿಕ್ಕಮಗಳೂರು, ನಗರದ ಕೋಟೆ ಕೆರೆ ಸುತ್ತಲೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಕಿಂಗ್ ಪಾತ್ ಹಾಗೂ ವಿದ್ಯುತ್ ದ್ವೀಪ ಅಳವಡಿಸಬೇಕು ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್ ಕಟಾರಿಯಾ ಅವರು ತಹಸೀಲ್ದಾರ್ ಹಾಗೂ ಪೌರಾಯುಕ್ತರಿಗೆ ಸೂಚನೆ ನೀಡಿದರು.

ಕೆರೆ ಸುತ್ತ ವಾಕಿಂಗ್‌ ಪಾತ್‌ ನಿರ್ಮಿಸಬೇಕು, ಕಸ ಹಾಕುವುದನ್ನು ತಡೆಯಲು ಸಿಸಿ ಟಿವಿ ಅಳವಡಿಸಬೇಕು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಕೋಟೆ ಕೆರೆ ಸುತ್ತಲೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಕಿಂಗ್ ಪಾತ್ ಹಾಗೂ ವಿದ್ಯುತ್ ದ್ವೀಪ ಅಳವಡಿಸಬೇಕು ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್ ಕಟಾರಿಯಾ ಅವರು ತಹಸೀಲ್ದಾರ್ ಹಾಗೂ ಪೌರಾಯುಕ್ತರಿಗೆ ಸೂಚನೆ ನೀಡಿದರು.

ಸ್ವಚ್ಛ ಚಾರಿಟಬಲ್ ಟ್ರಸ್ಟ್ ಕರೆಯ ಮೇರೆಗೆ ಶುಕ್ರವಾರ ಕೋಟೆಕೆರೆಗೆ ಭೇಟಿ ನೀಡಿದ ಅವರು, ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕೆರೆ ಸುತ್ತಮುತ್ತಲೂ ಹೆಚ್ಚಿರುವ ಗಿಡ ಗಂಟಿಗಳನ್ನು ತೆರವುಗೊಳಿಸಬೇಕು. ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಪಾದಚಾರಿಗಳಿಗೆ ಅನುಕೂಲವಾಗಲು ವಾಕಿಂಗ್‌ ಪಾತ್ ನಿರ್ಮಿಸಬೇಕು ಎಂದು ಸೂಚನೆ ನೀಡಿದರು. ನಗರದ ಹೃದಯ ಭಾಗದಲ್ಲಿ ಕೆರೆ ಅಭಿವೃದ್ಧಿಗೆ ಜಿಲ್ಲಾಡಳಿತ ಶ್ರಮಿಸಲಿದೆ. ಅಲ್ಲದೇ ಕೆರೆ ಸುತ್ತಮುತ್ತಲು ಸರ್ವೆ ನಡೆಸಿ ಒತ್ತುವರಿ ಕಂಡುಬಂದಲ್ಲಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದ ಅವರು, ಕೊಳಚೆ ನೀರು ಕೆರೆಗೆ ಹರಿಯ ದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.ಕೆರೆಯ ಸುತ್ತಲು ಕೆಲವು ಸಾರ್ವಜನಿಕರು ಕಸ ಎಲ್ಲೆಂದರಲ್ಲೇ ಬೀಸಾಡುತ್ತಿರುವ ಹಿನ್ನೆಲೆಯಲ್ಲಿ ಪೌರಾಯುಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದು ಮುಂಬರುವ ದಿನಗಳಲ್ಲಿ ಕೆರೆ ಭಾಗದಲ್ಲಿ ಸಿಸಿಟಿವಿ ಅಳವಡಿಸುವ ಜೊತೆಗೆ ಕಾವಲುಗಾರನನ್ನು ನೇಮಿಸಿ ಉತ್ತಮ ವಾತಾವರಣ ನಿರ್ಮಿಸಲು ಕ್ರಮ ವಹಿಸುತ್ತೇವೆ ಎಂದರು.ಸ್ವಚ್ಛ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಶುಭ ವಿಜಯ್ ಮಾತನಾಡಿ, ಕೆರೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎರಡೂ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯ ಟ್ರಸ್ಟ್‌ನಿಂದ ಮಾಡಲಾಗುತ್ತಿದೆ. ಸಸಿಗಳ ನಿರ್ವಹಣೆಯನ್ನು ತಾವು ನಿರ್ವಹಿಸುತ್ತಿದ್ದು ಜೊತೆಗೆ ನಗರಸಭೆ ಕೈಜೋಡಿಸಿದರೆ ಸಮೃದ್ಧ ವಾತಾವರಣ ಲಭ್ಯವಾಗಲಿದೆ ಎಂದು ಹೇಳಿದರು.ರಾತ್ರಿ ಸಮಯದಲ್ಲಿ ಕಾರು ಅಥವಾ ಬೈಕ್‌ಗಳಲ್ಲಿ ಕೆರೆಯ ಒಳಾಂಗಣಕ್ಕೆ ತೆರಳುವ ಕೆಲವು ಕುಡುಕರು ಮಧ್ಯ ರಾತ್ರಿವರೆಗೆ ಮದ್ಯ ಸೇವಿಸಿ ಎಲ್ಲೆಂದರಲ್ಲೇ ಬಾಟಲಿ ಬೀಸಾಡುವುದು, ಒಡೆದು ಹಾಕುವ ಸ್ಥಿತಿಯಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕಾರ್ಯ ದರ್ಶಿಗಳು ಕ್ರಮಕ್ಕೆ ಗಮನಹರಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ಸುಮಂತ್, ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್, ಸ್ವಚ್ಛ ಚಾರಿಟಬಲ್ ಟ್ರಸ್ಟ್ ಕಾಯದರ್ಶಿ ಡಾ. ಗೀತಾ ವೆಂಕಟೇಶ್, ಟ್ರಸ್ಟಿ ಎಚ್.ಪಿ.ಲಕ್ಷ್ಮೀ ಇದ್ದರು. 12 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್ ಕಟಾರಿಯಾ ಕೋಟೆ ಕೆರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.