ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಬರ ಘೋಷಣೆಯಾಗಿರುವ ತಾಲೂಕುಗಳಲ್ಲಿ ಫ್ರೂಟ್ಸ್ ಮೂಲಕ ರೈತರ ನೋಂದಣಿಯನ್ನು ಶೇ.95 ರಷ್ಟು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದರು.
ಜಿಲ್ಲೆಯಲ್ಲಿ ಕಡೂರು, ಅಜ್ಜಂಪುರ, ಚಿಕ್ಕಮಗಳೂರು ತಾಲೂಕುಗಳಲ್ಲಿ ರೈತರ ನೋಂದಣಿ ಶೇ.72 ರಷ್ಟು ಮಾತ್ರ ಆಗಿದ್ದು, ಉಳಿದಂತೆ ರೈತರ ನೋಂದಣಿಯಾಗದಿರುವುದು ಕಂಡು ಬಂದಿದೆ. ಆಯಾಯ ತಾಲೂಕುಗಳ ತಹಸೀಲ್ದಾರರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಂಟಿ ಸಭೆ ನಡೆಸಿ, ಪ್ರತಿ ಹಳ್ಳಿಗಳ ಮನೆ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದು 20 ದಿನದೊಳಗೆ ಫ್ರೂಟ್ಸ್ ಐಡಿಯಲ್ಲಿ ರೈತರನ್ನು ನೋಂದಾಯಿಸಲು ಕ್ರಮ ವಹಿಸಬೇಕು ಎಂದರು.ತದನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಲ್ಲಾ ತಾಲೂಕು ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳಿಗೆ ಜವಾಬ್ಧಾರಿ ನೀಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಇವುಗಳ ಮೇಲುಸ್ತುವಾರಿಯಲ್ಲಿ ಜನರಿಗೆ ಏನು ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದರು. ಈ ಭಾರಿ ಮಳೆ ಕೊರತೆಯಿಂದ ಹಿಂಗಾರು ಹಂಗಾಮು ರಸಗೊಬ್ಬರ, ಬಿತ್ತನೆ ಬೀಜಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಮಳೆ ಕೊರತೆಯಿಂದಾಗಿ ಎಲ್ಲ ರೀತಿಯ ಬೆಳೆಗಳು ಸೇರಿ ತೋಟಗಾರಿಕೆ ಬೆಳೆಗಳ ರೈತರಿಗೆ ನಷ್ಟವಾಗಿದ್ದು, ಬೆಳೆ ವಿಮೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರೈತರಿಗೆ ಮೇವಿನ ಕಿಟ್ ವಿತರಿಸಬೇಕು. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ 20 ಲಕ್ಷ ರು. ವರೆಗೆ ಶೇ.4ರ ಬಡ್ಡಿ ದರದಲ್ಲಿ ಸಹಾಯಧನದಲ್ಲಿ ಕೃಷಿ ಸಾಲ ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ ಎಂದು ಹೇಳಿದರು. ಅಮೃತ್ ಮಹಲ್ ಕಾವಲು ಭೂಮಿ ವಿವಿಧೆಡೆ ಸುಮಾರು ಆರು ಸಾವಿರ ಎಕರೆ ಜಮೀನು ಹೊಂದಿದ್ದು, ಇದರಲ್ಲಿ ಕೆಲವು ಭಾಗ ಒತ್ತುವರಿಯಾಗಿದೆ. ನ್ಯಾಯಾಲಯದ ಹಂತದಲ್ಲಿ ಇರುವುದಾಗಿ ಅಧಿಕಾರಿಗಳು ತಿಳಿಸಿದ ಹಿನ್ನೆಲೆ ಜಿಲ್ಲೆಯಲ್ಲಿ ಒತ್ತುವರಿ ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಜಮೀನನ್ನು ಉಳಿಸಿಕೊಳ್ಳುಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕಂದಾಯ ಗ್ರಾಮಗಳನ್ನು ಗುರುತಿಸಲು ಎಲ್ಲ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ, ಸರ್ಕಾರಿ ನಿಯಮದಂತೆ ಹೊಸ ಸರ್ವೆ ನಂಬರ್‌ಗಳನ್ನು ನೀಡಿ ಪೋಡಿ ಮುಕ್ತ ಗ್ರಾಮಗಳನ್ನಾಗಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಈ ರೀತಿಯ ಬಾಕಿ ಪ್ರಕರಣಗಳನ್ನು ತುರ್ತಾಗಿ ಬಗೆಹರಿಸಬೇಕು ಎಂದರು. ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಭಾಗವಹಿಸಿದ್ದರು.
ಪೋಟೋ ಫೈಲ್ ನೇಮ್ 19 ಕೆಸಿಕೆಎಂ 5