ಸಾರಾಂಶ
ಬೆಳಗ್ಗೆ ದೇವರ ಬಲಿ ಹೊರಟು ನಂತರ ಧ್ವಜಾರೋಹಣ, ಶಿಬರೂರು ಕೊಡಮಣಿತ್ತಾಯ ಮತ್ತು ಶ್ರೀ ದೇವರ ಭೇಟಿ, ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಲಿ, ದೊಡ್ಡ ಅಜಕಾಯಿ, ರಾಜಾಂಗಣ ಪ್ರಸಾದ ವಿತರಣೆ, ಚಿನ್ನದ ರಥ ಉತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ವಸಂತ ಮಂಟಪ ಪೂಜೆ, ಅಷ್ಟಾವಧಾನ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವ ಪ್ರಯುಕ್ತ ಭಾನುವಾರ ಬೆಳಗ್ಗೆ ಧ್ವಜಾರೋಹಣ ನಡೆಯಿತು.ಬೆಳಗ್ಗೆ ದೇವರ ಬಲಿ ಹೊರಟು ನಂತರ ಧ್ವಜಾರೋಹಣ, ಶಿಬರೂರು ಕೊಡಮಣಿತ್ತಾಯ ಮತ್ತು ಶ್ರೀ ದೇವರ ಭೇಟಿ, ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಲಿ, ದೊಡ್ಡ ಅಜಕಾಯಿ, ರಾಜಾಂಗಣ ಪ್ರಸಾದ ವಿತರಣೆ, ಚಿನ್ನದ ರಥ ಉತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ವಸಂತ ಮಂಟಪ ಪೂಜೆ, ಅಷ್ಟಾವಧಾನ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಸ್ವತಿ ಸದನದಲ್ಲಿ ದಿನವಿಡೀ ಕಲಾರಾಧನೆ ನಡೆಯಿತು. ತಂತ್ರಿಗಳಾದ ಕೃಷ್ಣರಾಜ ತಂತ್ರಿ, ದೇವಳದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ್ ಆಸ್ರಣ್ಣ, ಶ್ರೀ ಹರಿನಾರಾಯಣ ದಾಸ ಆಸ್ರಣ್ಣ, ಅತ್ತೂರು ಬೈಲು ವೆಂಕಟ ರಾಜ ಉಡುಪ, ಜಯರಾಮ ಉಡುಪ ಮೂಡುಮನೆ, ವೇದವ್ಯಾಸ ಉಡುಪ ದೇವಸ್ಯಮಠ, ಪ್ರವೀಣ್ ಶೆಟ್ಟಿ ಕೊಡೆತ್ತೂರುಗುತ್ತು, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಅತ್ತೂರು, ಕೊಡೆತ್ತೂರು, ಎಕ್ಕಾರು, ಶಿಬರೂರು ಗ್ರಾಮಸ್ಥರು ಉಪಸ್ಥಿತರಿದ್ದರು.ಹೊರೆಕಾಣಿಕೆ ಸಮರ್ಪಣೆ:ಧ್ವಜಾರೋಹಣದ ಪೂರ್ವಭಾವಿಯಾಗಿ ಕಟೀಲಿನ ಸಿತ್ಲ ಹಾಗೂ ಗಿಡಿಗೆರೆಯ ಗ್ರಾಮಸ್ಥರು ಹೊರೆಕಾಣಿಕೆ ತಂದು ಸಮರ್ಪಿಸಿದರು.
ಇಂದಿನ ಕಾರ್ಯಕ್ರಮ:ಸೋಮವಾರ ಬೆಳಗ್ಗೆ 4.30ಕ್ಕೆ ಯುಗಾದಿ ವಿಷು ದೀಪದ ಬಲಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 6ರಿಂದ 9.30ರ ವರೆಗೆ 2ನೇ ದಿನದ ರಾತ್ರಿ ಬಲಿ ಪ್ರಾರಂಭ, ಚಿನ್ನದ ರಥ ಉತ್ಸವ, ಚಿನ್ನದ ಪಲ್ಲಕಿ ಉತ್ಸವ, ವಸಂತ ಮಂಟಪ ಪೂಜೆ, ಅಷ್ಟಾವಧಾನ, ರಾತ್ರಿ 9.45ಕ್ಕೆ ಪಂಚಾಂಗ ಪೂಜೆ, ಪಠನ, ಸರಸ್ವತೀ ಸದನದಲ್ಲಿ ದಿನವಿಡೀ ಕಲಾರಾಧನೆ ನಡೆಯಲಿದೆ.8 ಸಾವಿರ ಲೀಟರ್ ಪಾನಕ ವಿತರಣೆ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಪಾನಕ ಸೇವೆಯು ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ.ಜಾತ್ರಾ ಮಹೋತ್ಸವದ ಮೊದಲ ದಿನ ದೇವಳದ ಮುಂಭಾಗದಲ್ಲಿ ಆಗಮಿಸುವ ಭಕ್ತರಿಗೆ ಪಾನಕ ವಿತರಣೆ ಮಾಡಲಾಗುತ್ತಿದ್ದು, ಸುಮಾರು ೮ ರಿಂದ ೯ ಸಾವಿರ ಲೀಟರ್ ಪಾನಕ ವಿತರಣೆಯಾಗುತ್ತಿದೆ. ಸುಮಾರು ೭೫೦ ಕಿಲೋ ಸಕ್ಕರೆ, ಕೇಸರಿ ಮತ್ತು ಲಿಂಬೆ ಹಣ್ಣಿನಿಂದ ಇದು ತಯಾರಾಗುತ್ತಿದ್ದು, ಕ್ಷೇತ್ರದ ಆಸ್ರಣ್ಣರು ಬೆಳಗ್ಗೆ ಪಾನಕಕ್ಕೆ ದೇವರ ಪ್ರಸಾದ ಹಾಕುತ್ತಾರೆ. ನಂತರ ಪಾನಕ ಪ್ರಸಾದ ವಿತರಣೆಗೆ ಚಾಲನೆ ನೀಡಲಾಗುತ್ತದೆ. ಭಕ್ತರಿಗೆ ಪ್ರಸಾದ ರೂಪದಲ್ಲಿ ಬೇಕಾದಷ್ಟು ಕುಡಿಯಲು ಮಾತ್ರವಲ್ಲದೆ, ಮನೆಗೆ ತೆಗೆದುಕೊಂಡು ಹೋಗಲು ವಿತರಿಸಲಾಗುತ್ತದೆ. ಸುಮಾರು ೪೦ ವರ್ಷದಿಂದ ಕಟೀಲು ಕಿನ್ನಿಗೋಳಿ ಜಿಎಸ್‌ಬಿ ಸಮಾಜದವರು ಇದನ್ನು ತಯಾರಿಸಿ ಭಕ್ತರಿಗೆ ವಿತರಿಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ.