ಮಾದೇಶ್ವರ ಬೆಟ್ಟದಲ್ಲಿ ಕಟ್ಟೆ ಮಾರಮ್ಮನ ಜಾತ್ರಾ ಮಹೋತ್ಸವ

| Published : Apr 14 2025, 01:15 AM IST

ಸಾರಾಂಶ

ಮಲೆ ಮಾದೇಶ್ವರ ಬೆಟ್ಟದಲ್ಲಿ ಕಟ್ಟೆ ಮಾರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಸಂಭ್ರಮ ಸಡಗರದೊಂದಿಗೆ ಜರುಗಿತು.

ಹನೂರು: ಮಲೆ ಮಾದೇಶ್ವರ ಬೆಟ್ಟದಲ್ಲಿ ಕಟ್ಟೆ ಮಾರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಸಂಭ್ರಮ ಸಡಗರದೊಂದಿಗೆ ಜರುಗಿತು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಗ್ರಾಮ ದೇವತೆ ಕಟ್ಟೆ ಮಾರಮ್ಮನ ಹಬ್ಬದ ಪ್ರಯುಕ್ತ ಮಾರಮ್ಮ ದೇವಿಗೆ ವಿಶೇಷ ಪೂಜೆ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೇಡಗಂಪಣ ಸಮುದಾಯದ ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮಗಳು ಜರುಗಿತು.

ಒನಕೆ ವೇಷ ಧರಿಸಿ ಸಂಭ್ರಮಾಚರಣೆ: ಬೇಡಗಂಪಣ ಸಮುದಾಯದ ಮಕ್ಕಳು ಹಿರಿಯರು ವಿವಿಧ ವೇಷಭೂಷಣಗಳನ್ನು ಅಲಂಕರಿಸಿ ಒನಕೆ ವೇಷಧರಿಸಿ ದೇವಾಲಯದ ಮುಂಭಾಗ ಕುಣಿಯುವುದು, ತಲ ತಲಾಂತರದಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯವಾಗಿದೆ. ಮಾರಮ್ಮನ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ಒನಕೆ ವೇಷದಾರಿಗಳ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ಭಕ್ತ ಸಮೂಹ ಕಣ್ತುಂಬಿ ಕೊಂಡರು.

ಗಮನ ಸೆಳೆದ ಪುಟ್ಟ ಮಕ್ಕಳು: ಕಟ್ಟೆ ಮಾರಮ್ಮನ ಜಾತ್ರಾ ಮಹೋತ್ಸವದಲ್ಲಿ ಬೇಡಗಂಪಣ ಸಮುದಾಯದ ಸಣ್ಣ ಮಕ್ಕಳು ಹಸಿರು ಗಿಡಗಳನ್ನು ಸುತ್ತಿಕೊಂಡು ಮುಖಕ್ಕೆ ಕಪ್ಪು ಮಸಿಯಿಂದ ಅಲಂಕಾರಗೊಳಿಸಿ ಕಾಡಿನ ಮಕ್ಕಳ ಹಾಗೆ ಜಾತ್ರೆಯಲ್ಲಿ ಭಾಗವಹಿಸಿ ಗಮನಸೆಳೆದರು.

18 ಹಳ್ಳಿಗಳಿಂದಲೂ ಭಕ್ತರು ಭಾಗಿ: ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ಕಟ್ಟೆ ಮಾರಮ್ಮನ ಜಾತ್ರಾ ಮಹೋತ್ಸವದ ಹಬ್ಬಕ್ಕೆ ಬೇಡಗಂಪಣ ಸಮುದಾಯದ ನಿವಾಸಿಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ಬೆಟ್ಟದ ತಪ್ಪಲಿನಲ್ಲಿ ಬರುವ ವಿವಿಧ ಗ್ರಾಮಗಳಿಂದಲೂ ಬೇಡಗಂಪಣ ಸಮುದಾಯದ ನಿವಾಸಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಲ್ಲಿನ ಸಾಂಪ್ರದಾಯದಂತೆ ಪೂಜೆ ನೆರವೇರಿಸುವುದು ಇಲ್ಲಿನ ವಿಶೇಷತೆ.