ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ತಾಲೂಕಿನ ಕಟ್ಟೆಮಾಡು ಗ್ರಾಮದ ಮೃತ್ಯುಂಜಯ ದೇಗುಲಕ್ಕೆ ಕೊಡವ ಸಾಂಪ್ರದಾಯಿಕ ಉಡುಗೆ ಧರಿಸಿ ಬಂದವರಿಗೆ ಅಡ್ಡಿಪಡಿಸಲಾಯಿತು ಎಂಬ ಕಾರಣಕ್ಕೆ ಸೋಮವಾರ ವಿವಿಧ ಕೊಡವ ಸಂಘಟನೆಗಳು ಕರೆ ನೀಡಿದ್ದ “ಕೊಡವರ ನಡೆ ಕಟ್ಟೆಮಾಡು ಕಡೆ” ಜಾಥಾಕ್ಕೆ ಪೊಲೀಸರು ತಡೆ ಒಡ್ಡಿದ ಘಟನೆ ಸೋಮಾರ ನಡೆದಿದೆ.ಇದರಿಂದ ಜಿಲ್ಲೆಯಾದ್ಯಂತ ಕೊಡವರು ತೀವ್ರ ಅಸಮಾಧಾನಗೊಂಡು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ.
ಜಿಲ್ಲಾಡಳಿತ ಕಟ್ಟೆಮಾಡು ದೇವಸ್ಥಾನದ ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಿ ಜಾಥಾ ಕೈಬಿಡುವಂತೆ ಮನವಿ ಮಾಡಿತು. ಮನವಿಗೆ ಸ್ಪಂದಿಸಿದ ಗೌಡ ಜನಾಂಗದ ಸಂಘಟನೆಗಳು ಜಾಥಾ ಕೈಬಿಟ್ಟವು. ಆದರೆ ಕೊಡವ ಜನಾಂಗದ ವಿವಿಧ ಸಂಘಟನೆಗಳು ಜಾಥಾ ಹೊರಡಲು ಪೊನ್ನಂಪೇಟೆಯಲ್ಲಿ ಸಿದ್ದತೆ ನಡೆಸಿದ್ದು, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.ಉಭಯ ಜನಾಂಗಗಳ ನಡುವೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಹಾಗೂ ಶಾಂತಿಭಂಗ ತರುವವರ ವಿರುದ್ಧ ಕಠಿಣಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಸಂಘಟಕರು ಪೊಲೀಸರ ವಶಕ್ಕೆ: ಕಟ್ಟೆಮಾಡುವಿನ ಜಾಥಾ ತೆರಳಲು ಕರೆ ನೀಡಿದ್ದ ಸಂಘಟಕರನ್ನು ಪೊಲೀಸರು ಬೆಳಗ್ಗೆಯೇ ವಶಕ್ಕೆ ಪಡೆದುಕೊಂಡರು. ಇದರಿಂದ ಅಸಮಾಧಾನರಾದ ಕೊಡವರು ಪೊನ್ನಂಪೇಟೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಸಣ್ಣುವಂಡ ದರ್ಶನ್ ಕಾವೇರಪ್ಪ ಮನೆಗೆ ಬೆಳಗ್ಗೆ ಪೊಲೀಸರು ಬಂದು ಪೊನ್ನಂಪೇಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಇದರಿಂದ ಪೊನ್ನಂಪೇಟೆ ಪೊಲೀಸ್ ಠಾಣೆಯ ಮುಂಭಾಗ ನೂರಾರು ಸಂಖ್ಯೆಯಲ್ಲಿ ಕೊಡವರು ಸೇರಿ ಪ್ರತಿಭಟಿಸಿದರು. ಯಾವುದೇ ಕಾರಣಕ್ಕೂ ಜಾಥಾವನ್ನು ಕೈಬಿಡಲು ಆಗುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ರಸ್ತೆ ತಡೆ ಪ್ರತಿಭಟನೆ ಘೋಷಣೆಗಳನ್ನು ನಾವು ಯಾವುದು ಮಾಡುವುದಿಲ್ಲ, ಶಾಂತಿಯುತವಾಗಿ ಕಟ್ಟೆಮಾಡು ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಎಂದು ಮೌಖಿಕವಾಗಿ ಹೇಳಿದ್ದರು. ಇದರಿಂದ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ವಾಗ್ವಾದ ನಡೆದು ಸುಮಾರು 40ಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ತಮ್ಮ ವಾಹನದಲ್ಲಿ ಕುಶಾಲನಗರ ತಾಲೂಕಿನ ಕೂಡಿಗೆ ಭಾಗಕ್ಕೆ ಕರೆದುಕೊಂಡು ಹೋದರು. ಇದರಿಂದ ಕೊಡವರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತು. ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ನಾಪೋಕ್ಲು ಸೇರಿದಂತೆ ಹಲವು ಕಡೆ ರಸ್ತೆ ತಡೆ ಮಾಡಲಾರಂಭಿಸಿದರು. ನಂತರ ಸಂಜೆ ವೇಳೆಗೆ ವಶಕ್ಕೆ ಪಡೆದವರನ್ನು ಪೊಲೀಸರು ಮತ್ತೆ ಪೊನ್ನಂಪೇಟೆ ಕರೆತಂದರು. ಇದರಿಂದ ಸಂಜೆ ವೇಳೆಗೆ ಪ್ರತಿಭಟನೆ ಕೈಬಿಡಲಾಯಿತು.ದೇವಾಲಯ ಸುತ್ತ ಖಾಕಿ ಪಡೆ
ಕಟ್ಟೆಮಾಡುವಿನ ಮೃತ್ಯುಂಜಯ ದೇವಾಲಯ ಸುತ್ತ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ದೇವಾಲಯದ 5 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ, ಭಕ್ತರಿಗೆ ದೇವಾಲಯ ಪ್ರವೇಶ ನಿಷೇಧ ಮಾಡಲಾಗಿತ್ತು.ಅಡಿಷನಲ್ ಎಸ್.ಪಿ, 2 ಡಿವೈಎಸ್‌ಪಿ, 5 ಸರ್ಕಲ್ ಇನ್ಸ್ಪೆಕ್ಟರ್, 10 ಪಿಎಸ್‌ಐ ಸೇರಿದಂತೆ 300 ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಮಾಡಲಾಗಿತ್ತು. ಅಲ್ಲದೆ 3 ಕೆಎಸ್‌ಆರ್‌ಪಿ ತುಕಡಿಗಳು ಸ್ಥಳದಲ್ಲಿ ನಿಯೋಜನೆಗೊಳಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಪರಿಸ್ಥಿತಿ ಅವಲೋಕಿಸಿದರು.ಹಲವೆಡೆ ಪ್ರತಿಭಟನೆ, ರಸ್ತೆ ತಡೆ, ಬಂದ್!
ಕಟ್ಟೆಮಾಡು ಮೃತ್ಯುಂಜಯ ದೇವಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡವರು ಹಲವು ಕಡೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಗೋಣಿಕೊಪ್ಪ, ವಿರಾಜಪೇಟೆ, ನಾಪೋಕ್ಲು, ಹುದಿಕೇರಿ, ಪೊನ್ನಂಪೇಟೆ ಪಟ್ಟಣಗಳಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಗೋಣಿಕೊಪ್ಪ ಕೊಡವ ಸಮಾಜ ಹಾಗೂ ಇಗ್ಗುತ್ತಪ್ಪ ಕೊಡವ ಸಮಾಜ ಮತ್ತಿತರ ಕೊಡವ ಸಂಘಟನೆಗಳ ಕರೆಯ ಮೇರೆಗೆ ಗೋಣಿಕೊಪ್ಪದಲ್ಲಿ ಮಧ್ಯಾಹ್ನ 1ಗಂಟೆಯಿಂದ ಸಂಜೆ 4 ಗಂಟೆವರೆಗೆ ಸ್ವಯಂಪ್ರೇರಿತ ಬಂದ್ ಮಾಡಲಾಗಿತ್ತು.
ನಗರದ ಎಲ್ಲಾ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ವರ್ತಕರಿಂದ ಸ್ವಯಂಪ್ರೇರಿತ ಬಂದ್ ಆಗಿತ್ತು.ಪ್ರಮುಖರೊಂದಿಗೆ ನಡೆದ ಶಾಂತಿ ಸಭೆ : ಒಂದು ವಾರ ಕಾಲಾವಕಾಶಕ್ಕೆ ಜಿಲ್ಲಾಡಳಿತ ಸಮ್ಮತಿ
ಕನ್ನಡಪ್ರಭ ವಾರ್ತೆ ಮಡಿಕೇರಿಕಟ್ಟೆಮಾಡು ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಉಭಯ ಕಡೆಯ ಪ್ರಮುಖರ ಶಾಂತಿ ಸಭೆಯಲ್ಲಿ ದೇವಾಲಯದ ಆಡಳಿತ ಮಂಡಳಿಯವರು 1 ವಾರಗಳ ಕಾಲಾವಕಾಶ ನೀಡುವಂತೆ ಸಭೆಯಲ್ಲಿ ಕೋರಿಕೊಂಡ ಹಿನ್ನೆಲೆ ಅಲ್ಲಿಯ ತನಕ ಯಥಾಸ್ಥಿತಿ ಕಾಪಾಡುವಂತೆ ತೀರ್ಮಾನಿಸಲಾಯಿತು.
ಬೈಲಾ ಸಂಬಂಧಿತ ಜಿಲ್ಲಾಡಳಿತ ಕೂಡ ಮಧ್ಯಪ್ರವೇಶಿಸಬಹುದು - ಆದರೆ ಊರಿನ ದೇವಾಲಯ ಅಲ್ಲಿನ ಆಡಳಿತ ಮಂಡಳಿಯವರು ತೀರ್ಮಾನ ತೆಗೆದುಕೊಳ್ಳಬೇಕಷ್ಟೇ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಜ.2 ರವರೆಗೆ ಕಟ್ಟೆಮಾಡು ದೇವಾಲಯ ವ್ಯಾಪ್ತಿಯಲ್ಲಿ ಸೆ 163 ಮುಂದುವರಿಕೆ ಮಾಡಲಾಗುವುದು. ಅಗತ್ಯ ಬಿದ್ದಲ್ಲಿ ಮತ್ತಷ್ಟು ದಿನಗಳ ಕಾಲ ಸೆಕ್ಷನ್ ವಿಸ್ತರಣೆ ಮಾಡಲಾಗುವುದು. ಕಾನೂನು ಕೈಗೆತ್ತಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಟಾಧಿಕಾರಿ ರಾಮರಾಜನ್ ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಸಮುದಾಯದ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಕಂಡುಬಂದಲ್ಲಿ ಉಭಯ ಸಮುದಾಯದವರಿಗೂ ದೂರು ದಾಖಲಿಸಲು ಕಾನೂನು ಪ್ರಕಾರ ಅವಕಾಶವಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ.ಎಲ್ಲರಿಗೂ ಸರಿಹೊಂದುವ ರೀತಿಯಲ್ಲಿ ಸೂಕ್ತ ತೀರ್ಮಾನಕ್ಕೆ ಬರುತ್ತೇವೆ ಒಂದು ವಾರಗಳ ಕಾಲಾವಕಾಶ ನೀಡಿ ಎಂಬ ದೇವಾಲಯ ಸಮಿತಿಯ ಕೋರಿಕೆಗೆ ಜಿಲ್ಲಾಡಳಿತ ಸಮ್ಮತಿ ಸೂಚಿಸಿದೆ.
ಒಂದು ವಾರ ಪ್ರತಿಭಟನೆ ಹಿಂಪಡೆದ ಕೊಡವರುಕಟ್ಟೆಮಾಡು ಪ್ರಕರಣದಲ್ಲಿ ಜಿಲ್ಲಾಡಳಿತ ಒಂದು ವಾರಗಳ ಕಾಲಾವಾಶ ನೀಡಲಾಗಿರುವ ಹಿನ್ನೆಲೆಯಲ್ಲಿ ಕೊಡವ ಸಂಘಟನೆಗಳ ಪ್ರಮುಖರು ಒಂದು ವಾರಗಳ ಕಾಲ ಪ್ರತಿಭಟನೆಯನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ. ಮುಂದೆ ನಡೆಯುವ ಬೆಳವಣಿಗೆಯನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.