ಕೌದಿ ಬಡವರ ಪಾಲಿನ ಗಾದಿ: ಡಾ.ಸತೀಶ್ ಪಾಟೀಲ್

| Published : Sep 25 2025, 01:02 AM IST

ಸಾರಾಂಶ

ಅಲೆಮಾರಿಗಳ ಬದುಕಿನ ಬವಣೆ ಕುರಿತಾಗಿ ಗಣೇಶ ಅಮೀನಗಡ ರಚಿಸಿದ ಕೌದಿ ಏಕ ವ್ಯಕ್ತಿ ನಾಟಕದ ನೆರೆದಿದ್ದ ವಿದ್ಯಾರ್ಥಿಗಳ ಮನಸೂರೆಗೊಂಡಿತು.

ಹೂವಿನಹಡಗಲಿ: ಅಲೆಮಾರಿಗಳ ಬದುಕಿನ ಬವಣೆ ಕುರಿತಾಗಿ ಗಣೇಶ ಅಮೀನಗಡ ರಚಿಸಿದ ಕೌದಿ ಏಕ ವ್ಯಕ್ತಿ ನಾಟಕದ ನೆರೆದಿದ್ದ ವಿದ್ಯಾರ್ಥಿಗಳ ಮನಸೂರೆಗೊಂಡಿತು.

ಪಟ್ಟಣದ ರುದ್ರಾಂಬಾ ಎಂ.ಪಿ. ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಿದ ಕೌದಿ ನಾಟಕವನ್ನು ಮೈಸೂರಿನ ಕವಿತಾ ಕಲಾತಂಡ ಪ್ರಸ್ತುತಪಡಿಸಿತು. ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಪಾಟೀಲ್ ಮಾತನಾಡಿ, ಜಾತಿಗಣತಿ ಹಾಗೂ ಮೀಸಲಾತಿ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಯಾವುದೇ ನೆಲೆಯಿಲ್ಲದೇ ಬದುಕುತ್ತಿರುವ ಅಲೆಮಾರಿಗಳ ಬದುಕಿನ ಬವಣೆಗಳನ್ನು ಬಹಳ ಪರಿಣಾಮಕಾರಿಯಾಗಿ ಪ್ರತಿನಿಧಿಸುವ, ಈ ನಾಟಕವನ್ನು ವಿದ್ಯಾರ್ಥಿಗಳು ನೋಡಿ ಅರ್ಥಮಾಡಿಕೊಳ್ಳಬೇಕೆಂದು ಹೇಳಿದರು.

ನಾಟಕ ರಚನೆಕಾರ ಗಣೇಶ್ ಅಮೀನಗಡ ಮಾತನಾಡಿ, ನಾಟಕವು ಬಡವರ ಪಾಲಿನ ಗಾದಿಯಾದ ಕೌದಿಯನ್ನು ರೂಪಕವಾಗಿ ಇಟ್ಟುಕೊಂಡು ಉತ್ತರ ಕರ್ನಾಟಕದ ಸೌಹಾರ್ದ, ಸಾಮರಸ್ಯವನ್ನಲ್ಲದೇ ಸಮುದಾಯದ ಸಂಕಟವನ್ನೂ ಪ್ರತಿಬಿಂಬಿಸಲಿದೆ ಎಂದು ಹೇಳಿದರು.

ಕಲಾವಿದೆ ಭಾಗ್ಯಶ್ರೀ ಪಾಳ ಒಂದು ಗಂಟೆ ಕಾಲ ಮನೋಜ್ಞವಾಗಿ ನಟಿಸುವ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು. ನಾಟಕದ ಬೆಳಕು, ಸಂಗೀತವನ್ನು ಪದ್ಮಾ ರಾಯಚೂರು ನಿರ್ವಹಿಸಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಪಿ.ಕೊಟ್ರೇಶ್, ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರೊ.ಎಚ್‌. ವೆಂಕಟೇಶ್, ಬೋಧಕರಾದ ಡಾ. ಸುರೇಶ್ ಬೂದನೂರು, ಜಿ.ಟಿ.ಊಮಾ, ಸುನಿತಾ ದೇವಿ, ಹನುಮಂತಪ್ಪ, ಕೆ.ರೀಟಾ, ಶ್ರೀಕಾಂತ್ ರಾಥೋಡ್, ಭಾಗ್ಯಶ್ರೀ ಮಠಪತಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.