ಸಾರಾಂಶ
ಏಕಾಏಕಿ ಬಂದು ನಮ್ಮನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಸಾಮಾನುಗಳನ್ನು ಹೊರಗೆಸೆದು ಮನೆ ನೆಲಸಮಗೊಳಿಸಿದ್ದಾರೆ ಎಂದು ವೃದ್ಧ ದಂಪತಿ ಮುತ್ತುಸ್ವಾಮಿ ಹಾಗೂ ರಾಧಮ್ಮ ಕಣ್ಣೀರು ಹಾಕಿದ್ದಾರೆ. ಮುತ್ತುಸ್ವಾಮಿ ದಂಪತಿಗೆ ವಾಸ್ತವ್ಯಕ್ಕೆ ಬೇರೆ ಮನೆ ಇಲ್ಲದೇ ಇರುವುದರಿಂದ ಈ ದಂಪತಿ ಈಗ ಕಂಗಲಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿದ್ದ ವೃದ್ಧ ಮುತ್ತುಸ್ವಾಮಿ ಎಂಬವರ ಮನೆಯನ್ನು ಕಡಬ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬುಧವಾರ ಮುಂಜಾನೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಜೆಸಿಬಿಬಳಸಿ ನೆಲಸಮಗೊಳಿಸಿದೆ.ಮೂಲತಃ ಚಿತ್ರದುರ್ಗ ನಿವಾಸಿ ಮುತ್ತುಸ್ವಾಮಿ ಕೂಲಿ ಕೆಲಸಕ್ಕಾಗಿ ಬಂದವರು, ಆರು ವರ್ಷದ ಹಿಂದೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಕಲ್ಲಿನ ಗೋಡೆ ಹಾಗೂ ಸಿಮೆಂಟ್ ಶೀಟ್‌ನ ಸಣ್ಣ ಮನೆ ನಿರ್ಮಿಸಿ, ಪರಿಸರದಲ್ಲಿ ಬಾಳೆ ಹಾಗೂ ಇತರೇ ಕೃಷಿಯನ್ನೂ ಮಾಡಿದ್ದರು. ಈ ಮನೆಯಲ್ಲಿ ಮುತ್ತುಸ್ವಾಮಿ ಪತ್ನಿ ರಾಧಮ್ಮ ಜೊತೆಗೆ ವಾಸ್ತವ್ಯವಿದ್ದರು. ಹೈನುಗಾರಿಕೆಯೊಂದಿಗೆ ಈ ಜಾಗದ ಸಮೀಪವೇ ಮುತ್ತುಸ್ವಾಮಿ ಸಣ್ಣ ಅಂಗಡಿ ಇಟ್ಟು ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಈ ಮಧ್ಯೆ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿರುವುದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಬೆಳ್ತಂಗಡಿ ತಾಲೂಕಿನ ಅಶೋಕ ಆಚಾರ್ಯ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಕಂದಾಯ ಇಲಾಖೆಯಿಂದ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಮನೆ ತೆರವುಗೊಳಿಸಲು ಹೈಕೋರ್ಟ್ ಆದೇಶವಾಗಿದ್ದು ತೆರವುಗೊಳಿಸುವಂತೆ ಮುತ್ತುಸ್ವಾಮಿಗೆ ನೋಟಿಸ್ ನೀಡಲಾಗಿತ್ತು. ಮನೆ ತೆರವಿಗೂ ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ತಣ್ಣಗಾಗಿತ್ತು. ಬುಧವಾರ ಬೆಳಗ್ಗೆ 7 ಗಂಟೆಗೆ ಪೊಲೀಸ್, ಮೆಸ್ಕಾಂ ಸಿಬ್ಬಂದಿ ಸಹಕಾರದಲ್ಲಿ ಕಾರ್ಯಾಚರಣೆ ನಡೆಯಿತು.ವೃದ್ಧ ದಂಪತಿ ಕಣ್ಣೀರು:
೯೪ಸಿ, ಅಕ್ರಮ ಸಕ್ರಮದಲ್ಲಿ ಅರ್ಜಿ ನೀಡಿದ್ದರೂ ತಿರಸ್ಕಾರ ಮಾಡಿದ್ದಾರೆ. ರೇಷನ್ ಕಾರ್ಡ್, ಆಧಾರ್‌ಕಾರ್ಡ್ ಆಗಿದೆ. ಈಗ ಏಕಾಏಕಿ ಬಂದು ನಮ್ಮನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಸಾಮಾನುಗಳನ್ನು ಹೊರಗೆಸೆದು ಮನೆ ನೆಲಸಮಗೊಳಿಸಿದ್ದಾರೆ ಎಂದು ವೃದ್ಧ ದಂಪತಿ ಮುತ್ತುಸ್ವಾಮಿ ಹಾಗೂ ರಾಧಮ್ಮ ಕಣ್ಣೀರು ಹಾಕಿದ್ದಾರೆ. ಮುತ್ತುಸ್ವಾಮಿ ದಂಪತಿಗೆ ವಾಸ್ತವ್ಯಕ್ಕೆ ಬೇರೆ ಮನೆ ಇಲ್ಲದೇ ಇರುವುದರಿಂದ ಈ ದಂಪತಿ ಈಗ ಕಂಗಲಾಗಿದ್ದಾರೆ.ದಯಾ ಮರಣ ಅರ್ಜಿ ಸಲ್ಲಿಸಿದ್ದರು:
ಈ ಹಿಂದೆ ಮನೆ ತೆರವುಗೊಳಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ದಯಾಮರಣ ಕೋರಿ ಫೆಬ್ರವರಿ ೨೦೨೪ರಲ್ಲಿ ಮುತ್ತುಸ್ವಾಮಿ ಹಾಗೂ ರಾಧಮ್ಮ ದಂಪತಿ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಮುತ್ತುಸ್ವಾಮಿ ಅವರು ಖಾಸಗಿ ವ್ಯಕ್ತಿಯೋರ್ವರಿಗೆ ಹಣ ನೀಡಿ ಈ ಸರಕಾರಿ ಜಾಗ ಖರೀದಿಸಿದ್ದರು ಎಂದು ಹೇಳಲಾಗಿದೆ. ಇದರಲ್ಲಿ ಅಂದಾಜು ೨೦ ಸೆಂಟ್ಸ್ ಜಾಗವಿದೆ.