ಸಾರಾಂಶ
ಗುರುಶಾಂತ ಜಡೆಹಿರೇಮಠ
ದಾಂಡೇಲಿ: ಪಶ್ಚಿಮ ಘಟ್ಟಗಳ ದಟ್ಟವಾದ ಕಾಡಿನ ಮಧ್ಯೆ, ಎತ್ತ ನೋಡಿದರತ್ತ ಹಚ್ಚ ಹಸಿರು, ವಿವಿಧ ಪಕ್ಷಿಗಳ ಕಲರವ, ಕಾಡು ಮೃಗಗಳ ಗರ್ಜನೆ, ಪಕ್ಕದಲ್ಲಿ ಹರಿಯುವ ಕಾಳಿ ನದಿ ನಡುವೆ ಬೃಹದಾಕಾರದ ಕವಳೇಶ್ವರ ಶಿವಲಿಂಗ...ಇದು ತಾಲೂಕಿನ ಪ್ರಸಿದ್ಧ ಶಿವತಾಣ. ಅಂಬಿಕಾನಗರದ ನಾಗಝರಿ ಕೆಪಿಸಿ ವಿದ್ಯುತ್ ಉತ್ಪಾದನ ಘಟಕದಿಂದ ಸುಮಾರು ಒಂದು ಸಾವಿರ ಮೆಟ್ಟಿಲುಗಳನ್ನು ಇಳಿದರೆ ಶಿವದೇವರ ಲಿಂಗ ದರ್ಶನ ಪಡೆಯಬಹುದು. ವರ್ಷಕ್ಕೊಮ್ಮೆ, ಶಿವರಾತ್ರಿಯಂದು ಮಾತ್ರ ಇಲ್ಲಿಗೆ ಪ್ರವೇಶವಿರುತ್ತದೆ.
ಶಿವರಾತ್ರಿಯಂದು ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಭಕ್ತರು ಇಲ್ಲಿಗೆ ಆಗಮಿಸಿ ಶಿವಲಿಂಗ ದರ್ಶನ ಪಡೆದು, ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.ಬೃಹದಾಕಾರದ ಕಲ್ಲಿನ ಗುಹೆಯಲ್ಲಿ ಕಪ್ಪು ಮತ್ತು ನೇರಳೆ ಬಣ್ಣದಿಂದ ಕೂಡಿದ ಕವಳೇಶ್ವರ ಲಿಂಗವಿದೆ. ಕವಳಾ ಗುಹೆಗೆ ಸಾಗಲು ಎರಡು ಮಾರ್ಗಗಳಿವೆ. ಒಂದು ಫನಸೋಲಿ ಗ್ರಾಮದಿಂದ ಕಾಡಿನ ಮಧ್ಯದಿಂದ ಇಳಿಜಾರು ರಸ್ತೆಯಿಂದ ಸಾಗಿ ಮೆಟ್ಟಿಲು ಇಳಿದು ಹೋಗುವುದು ಹಾಗೂ ಇನ್ನೊಂದು ಅಂಬಿಕಾನಗರ ನಾಗಝರಿ ಭಾಗದಿಂದ ಮೆಟ್ಟಿಲುಗಳನ್ನು ಇಳಿದು ಹೋಗಬೇಕಾಗುತ್ತದೆ. ಕವಳಾ ಗುಹೆಯೊಳಗೆ ಶಿವಲಿಂಗ ದರ್ಶನ ಪಡೆಯಲು ಇಕ್ಕಟ್ಟಾದ ದಾರಿ ಇದ್ದು, ಇನ್ನೊಂದು ದಾರಿಯಿಂದ ಸಾಗಿ ಗುಹೆಯಿಂದ ಹೊರ ಬರಬೇಕಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿವರಾತ್ರಿಗೆ ಬಂದು ಬೆಳಗ್ಗೆಯಿಂದ ಸಂಜೆ ವರೆಗೆ ಕಾಯಬೇಕಾಗುತ್ತದೆ.
ವರ್ಷಕ್ಕೆ ಒಂದು ಬಾರಿ ನಡೆಯುವ ಈ ಜಾತ್ರೆಗೆ ತಾತ್ಕಾಲಿಕ ವಿದ್ಯುತ್ ನೀಡಲಾಗುತ್ತದೆ. ಕೆಪಿಸಿಯವರು ವಿದ್ಯುತ ವ್ಯವಸ್ಥೆ, ಅಲಂಕಾರ ಮಾಡುತ್ತಾರೆ. ಕವಳಾ ಗುಹೆ ದಟ್ಟ ಕಾಡಿನ ಮಧ್ಯೆ ಇರುವುದರಿಂದ ಅರಣ್ಯ ಇಲಾಖೆಯವರು ಕಾಡಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ದರ್ಶನಕ್ಕೆ ಬರುವ ಭಕ್ತರಿಗೆ ಹಲವರು ನೀರು-ಬೆಲ್ಲ ವಿತರಿಸುತ್ತಾರೆ. ಅರಣ್ಯ ಇಲಾಖೆಯವರೂ ನೀರು, ಬೆಲ್ಲ, ಕಡಲೆಕಾಯಿ ವಿತರಿಸುತ್ತಾರೆ.ಕಾಡಿಗೆ ಯಾರೂ ಬೆಂಕಿ ಹಾಕಬಾರದು ಎಂದು ತಿಳಿವಳಿಕೆ ಫಲಕವನ್ನು ಅರಣ್ಯ ಇಲಾಖೆಯವರು ಅಳವಡಿಸುವ ಜತೆಗೆ ಧ್ವನಿವರ್ಧಕದ ಮೂಲಕ ಭಕ್ತರಿಗೆ ತಿಳಿವಳಿಕೆ ಮೂಡಿಸುತ್ತಾರೆ. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗುತ್ತದೆ. ಕವಳಾ ಜಾತ್ರೆಗೆ ದಾಂಡೇಲಿಯಿಂದ ಅಷ್ಟೇ ಅಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಶಿವರಾತ್ರಿಯಂದು ಜನರು ಆಗಮಿಸುತ್ತಾರೆ. ಹಿಂದೆ ಜಾತ್ರೆಗೆ ಒಂದೆರಡು ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಆದರೆ ಈಗ ಸುಮಾರು ಐವತ್ತು ಸಾವಿರ ಭಕ್ತರು ಶಿವರಾತ್ರಿ ದಿನ ಶಿವಲಿಂಗ ದರ್ಶನಕ್ಕೆ ಬರುತ್ತಾರೆ.
ಜಾತ್ರೆಗೂ ಮುನ್ನ ಫನಸೋಲಿ ಗ್ರಾಮಸ್ಥರ ಜತೆ ಸಭೆ ನಡೆಸುತ್ತೇವೆ. ಕಾಡಿನ ಮದ್ಯೆ ನಡೆಯುವ ಈ ಜಾತ್ರೆಗೆ ಬರುವ ಭಕ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ ಎನ್ನುತ್ತಾರೆ ವಿರನೋಲಿ ವಲಯ ಅರಣ್ಯ ವಿಭಾಗದ ಅಧಿಕಾರಿಗಳು. ವರ್ಷಕ್ಕೆ ಒಮ್ಮೆ ನಡೆಯುವ ಕವಳಾ ಜಾತ್ರೆಗೆ ಅರಣ್ಯ, ಪೊಲೀಸ್ ಇಲಾಖೆ, ಕೆಪಿಸಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ ಸೇರಿ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ.