ಮನ್‌ ಕಿ ಬಾತ್‌ನಲ್ಲಿ ಮೋದಿ ಶ್ಲಾಘಿಸಿದ್ದ ಗದುಗಿನ ಕಾವೆಂಶ್ರೀ ನಿಧನ

| Published : Mar 11 2025, 12:46 AM IST

ಮನ್‌ ಕಿ ಬಾತ್‌ನಲ್ಲಿ ಮೋದಿ ಶ್ಲಾಘಿಸಿದ್ದ ಗದುಗಿನ ಕಾವೆಂಶ್ರೀ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಹೆಸರಾಂತ ಸಾಹಿತಿ, ಹೋಟೆಲ್ ಉದ್ಯಮಿ, ಕಲಾಚೇತನ ಸಂಸ್ಥೆಯ ಮೂಲಕ ಕಳೆದ 25 ವರ್ಷಗಳಿಂದ ನಾಡಿನ ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದ ಕಾವೆಂಶ್ರೀ (54) ಸೋಮವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.

ಗದಗ: ಹೆಸರಾಂತ ಸಾಹಿತಿ, ಹೋಟೆಲ್ ಉದ್ಯಮಿ, ಕಲಾಚೇತನ ಸಂಸ್ಥೆಯ ಮೂಲಕ ಕಳೆದ 25 ವರ್ಷಗಳಿಂದ ನಾಡಿನ ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದ ಕಾವೆಂಶ್ರೀ (54) ಸೋಮವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕಾವೆಂಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾಹಿತ್ಯ, ಸಂಗೀತ ಮತ್ತು ರಂಗಕಲಾ ಬಳಗದಲ್ಲಿ ಕಾವೆಂಶ್ರೀ ಎಂದು ಕರೆಯಲ್ಪಡುತ್ತಿದ್ದ ಅವರ ಮೂಲ ಹೆಸರು ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಕಾಳಮಂಜಿ ಗ್ರಾಮದವರು. ಗದಗ ನಗರದಲ್ಲೇ ಕಳೆದ 34 ವರ್ಷದಿಂದ ವಾಸವಾಗಿದ್ದು ಜಿಲ್ಲೆಯ ಮನೆ ಮಗನಂತಾಗಿದ್ದರು. ಸೋಮವಾರ ಸಂಜೆ ಅವರ ಹುಟ್ಟೂರಾದ ಕಾಳಮಂಜಿಯಲ್ಲಿ ಅಂತ್ಯಸಂಸ್ಕಾರ ನೆರವೇರಿತು.

2022ರಲ್ಲಿ ತಮ್ಮ 96ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಇವರ 25 ವರ್ಷಗಳ ಕಲಾ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ಕಲೆ, ಸಂಸ್ಕೃತಿ ಉಳಿವಿಗಾಗಿ 1996ರಲ್ಲಿ ಕಲಾ ಚೇತನ ಸಂಸ್ಥೆ ಸ್ಥಾಪಿಸಿದ್ದ ಕಾವೆಂಶ್ರೀ, ತಮ್ಮ ಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಕಲಾವಿದರಿಂದ ಗದಗ ನಗರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಕಲೆ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ಅನೇಕ ಪತ್ರಿಕೆಗಳಲ್ಲಿ ಕಲೆ, ಸಾಹಿತ್ಯದ ಬಗ್ಗೆ ಬರಹ ಬರೆಯುತ್ತಿದ್ದರು. ಹೋಟೆಲ್ ಉದ್ಯಮದ ಜೊತೆಗೆ ಕಲಾ ಸೇವೆಯಲ್ಲಿ ತೊಡಗುವ ಮೂಲಕ ಮಾದರಿಯಾಗಿದ್ದರು.