ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಾವೇರಿ ನದಿ ನೀರಿನ ವಿಚಾರದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರೈತರಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಬಣ್ಣಿಸಿದರು.

ಪಟ್ಟಣದ ಕೋಟೆಬೀದಿಯ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜನುಮ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ರಾಜ್ಯದ ನೆಲ, ಜಲ ಹಾಗೂ ರೈತ ಪರ ತಮ್ಮ ಜೀವನದುದ್ದಕ್ಕೂ ಹೋರಾಟವನ್ನೇ ಮಾಡಿಕೊಂಡು ಬಂದಿದ್ದಾರೆ ಎಂದರು.

ಎಚ್.ಡಿ.ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲಿಯೂ ರಾಜ್ಯ ಸಭೆಯಲ್ಲಿ ರಾಜ್ಯದ ಅನೇಕ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ನಮ್ಮ ನಾಡು ಮತ್ತು ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ದೊರೆಯಲಿ ಎಂದರು.

ಜೆಡಿಎಸ್ ಅನ್ನು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಪಕ್ಷವನ್ನು ಸದೃಢಗೊಳಿಸುತ್ತಿದ್ದಾರೆ. ಅವರಿಗೆ ಎಲ್ಲೆಡೆ ಯುವಪಡೆ ಉತ್ತಮ ಬೆಂಬಲ ನೀಡುತ್ತಿದೆ ಎಂದರು.


ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ದೇವೇಗೌಡರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಪುರಸಭೆ ಮಾಜಿ ಉಪಾಧ್ಯಕ್ಷರಾದ ಟಿ.ನಂದಕುಮಾರ್, ಬಸವರಾಜು, ಮುಖಂಡರಾದ ಎಸ್.ಡಿ.ಜಯರಾಮು, ಪುಟ್ಟರಾಮು, ಎಂ.ಪಿ.ಮಧು, ಬಿ.ಎಂ.ಕಾಂತರಾಜು, ಸಿದ್ದಾಚಾರಿ, ಹನುಮಂತು, ಕುಂತೂರು ಸೋಮಶೇಖರ್ ಪಾಲ್ಗೊಂಡಿದ್ದರು.

ಇಂದು ಯುವ ಮನಸ್ಸುಗಳಿಗೆ ಗಾಂಧಿ ವಿಚಾರ ಮಂಥನ

ಕನ್ನಡಪ್ರಭ ವಾರ್ತೆ ಮಂಡ್ಯಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಜಿಲ್ಲಾ ಯುವ ಪರಿಷತ್ ವತಿಯಿಂದ ಮೇ ೧೯ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಗಾಂಧಿ ಭವನದಲ್ಲಿ ಯುವ ಮನಸ್ಸುಗಳಿಗೆ ಗಾಂಧಿ ರಾಜ್ಯಮಟ್ಟದ ವಿಚಾರ ಮಂಥನ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೋಡೇ ಪಿ.ಕೃಷ್ಣ ಅವರು ಸಮಾರಂಭ ಉದ್ಘಾಟಿಸುವರು. ಕೃಷಿ ವಿವಿ ಡೀನ್ ಡಾ.ಪಿ.ಎಸ್.ಫಾತೀಮಾ ಅಧ್ಯಕ್ಷತೆ ವಹಿಸುವರು. ಯಾಕಾಗಿ ಗಾಂಧಿ?, ಕುರಿತು ಕವಿ ಕೆ.ಪಿ.ಮೃತ್ಯುಂಜಯ ಉಪನ್ಯಾಸ ನೀಡುವರು.ಯುವಜನತೆ ಮತ್ತು ಗಾಂಧಿ ಕುರಿತು ಅಕ್ಕಮಹಾದೇವಿ ವಿವಿ ವಿಶೇಷ ಅಧಿಕಾರಿ ಡಾ.ವಿಷ್ಣು ಎಂ.ಶಿಂಧೆ ಅವರು ಉಪನ್ಯಾಸ ನೀಡುವರು. ಕೃಷಿ ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ, ಡಾ.ಪಿ.ಪ್ರವೀಣ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಪ್ರೊ.ಕೆ.ನಾಗಾನಂದ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಅಂದು ಬೆಳಗ್ಗೆ ೮ ಗಂಟೆಗೆ ನಗರದ ಗಜೇಂದ್ರಮೋಕ್ಷ ಕೊಳದ ಬಳಿ ಗಾಂಧೊ ನೆನಪಿನಲ್ಲಿ ಸಸ್ಯೋತ್ಸವ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ ೯ ಗಂಟೆಗೆ ಕುಂಚದಲ್ಲಿ ಗಾಂಧಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.