ಪವಿತ್ರ ಕಾವೇರಿ ತುಲಾ ಸಂಕ್ರಮಣ ಹಾಗೂ ತೀರ್ಥೋದ್ಭವ ಜಾತ್ರಾ ಮಹೋತ್ಸವದ ಅಂಗವಾಗಿ ಭಾಗಮಂಡಲದ ಐತಿಹಾಸಿಕ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ‘ಆಜ್ಞಾ ಮುಹೂರ್ತ’ ಕಾರ್ಯಕ್ರಮ ನಡೆಯಿತು.

ನಾಪೋಕ್ಲು: ಪವಿತ್ರ ಕಾವೇರಿ ತುಲಾ ಸಂಕ್ರಮಣ ಹಾಗೂ ತೀರ್ಥೋದ್ಭವ ಜಾತ್ರಾ ಮಹೋತ್ಸವದ ಅಂಗವಾಗಿ ಭಾಗಮಂಡಲದ ಐತಿಹಾಸಿಕ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ‘ಆಜ್ಞಾ ಮುಹೂರ್ತ’ ಕಾರ್ಯಕ್ರಮ ನಡೆಯಿತು.

ಸಂಪ್ರದಾಯದಂತೆ ಭಗಂಡೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಮಂಗಳವಾದ್ಯಮೇಳಗಳೊಂದಿಗೆ ರವಿ ಹೆಬ್ಬಾರ್ ನಿವಾಸಕ್ಕೆ ತೆರಳಿ ಅಲ್ಲಿಯ ತೋಟದಿಂದ ಶಾಸ್ತ್ರೋಕ್ತವಾಗಿ ಬಾಳೆಗೊನೆ ಕಡಿಯಲಾಯಿತು. ನಂತರ ಬಾಳೆಗೊನೆಯೊಂದಿಗೆ ದೇವಾಲಯಕ್ಕೆ ಹಿಂತಿರುಗಿ ಪ್ರದಕ್ಷಿಣೆ ಬಳಿಕ ತಪ್ಪಡ್ಕ (ತಪ್ಪು ದಂಡ)’ ತೆರುವ ಧಾರ್ಮಿಕ ವಿಧಿ ಪೂರ್ಣಗೊಳಿಸಲಾಯಿತು.

ಮದ್ಯ, ಮಾಂಸ ಸೇವನೆ ನಿಷೇಧ: ಜಾತ್ರೋತ್ಸವದ ಪವಿತ್ರತೆಯನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಸೋಮವಾರದಿಂದ ತಲಕಾವೇರಿ ಜಾತ್ರೆ ಮುಕ್ತಾಯಗೊಂಡು, ತೀರ್ಥೋದ್ಭವದ ಮರುದಿನದವರೆಗೆ ಭಾಗಮಂಡಲ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವನ್ನು ಭಕ್ತಾದಿಗಳು ಹಾಗೂ ಸಾರ್ವಜನಿಕರು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಯಾವುದೇ ರೀತಿಯ ವಿಘ್ನಗಳು ಸಂಭವಿಸದಿರಲೆಂದು ಪ್ರಾರ್ಥನೆ ಸಲ್ಲಿಸಿ ದೇವಾಲಯದ ತಕ್ಕ ಮುಖ್ಯಸ್ಥರು ಮನವಿ ಮಾಡಿದ್ದಾರೆ.

ನಾಲ್ಕು ಗ್ರಾಮಗಳ ದೇವಾಲಯಗಳ ತಕ್ಕ ಮುಖ್ಯಸ್ಥರು, ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಹಾಗೂ ದೇವಾಲಯದ ಆಡಳಿತಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಸೇರಿದಂತೆ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿ:

ಅ. 15 (ಮಧ್ಯಾಹ್ನ 12:35): ಧನು ಲಗ್ನದಲ್ಲಿ ‘ಅಕ್ಷಯ ಪಾತ್ರೆ’ಗೆ ಅಕ್ಕಿ ಹಾಕುವ ಕಾರ್ಯಕ್ರಮ.

ಅ. 15 (ಸಂಜೆ 6:03): ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವ ವಿಧಿ.

ಅ. 17 (ರಾತ್ರಿ 7:50): ಮೇಷ ಲಗ್ನದಲ್ಲಿ ಪವಿತ್ರ ‘ ಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ’ ನೆರವೇರಲಿದೆ.