ಸಾರಾಂಶ
ಶ್ರದ್ಧಾಂಜಲಿ । ಡಾ.ಕವಿತಾ ಕೃಷ್ಣ ನಿಧನಕ್ಕೆ ಗಣ್ಯರ ಸಂತಾಪ ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಡಾ.ಕವಿತಾ ಕೃಷ್ಣ ಸಾಹಿತ್ಯದ ಜ್ಞಾನ ಭಂಡಾರದಂತೆ. ಅವರ ಅಕಾಲಿಕ ಮರಣ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ ಉಂಟು ಮಾಡಿದೆ ಎಂದು ಸಾಹಿತ್ಯ ಶಾರದೆ ಜಯಂತಿ ಚಂದ್ರಶೇಖರ್ ತಿಳಿಸಿದರು.ತಾಲೂಕಿನ ಶ್ರವಣಬೆಳಗೊಳದ ಚಾವುಂಡರಾಯ ಉದ್ಯಾನದಲ್ಲಿ ಮಾಸಿಕ ನಮನ ಬಳಗದವರು ಆಯೋಜಿಸಿದ ಇತ್ತೀಚೆಗೆ ಅಗಲಿದ ಡಾ. ಕವಿತಾ ಕೃಷ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಕವನಗಳ ವಾಚನದ ೨೨ನೇ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಶ್ರವಣಬೆಳಗೊಳದ ಬಾಹುಬಲಿ ಕ್ಷೇತ್ರದಲ್ಲಿ ತಾವು ಬರೆದ ಮಮತೆ ಅಣತಿ ಪುಸ್ತಕ ಬಿಡುಗಡೆ ಮಾಡಿ ಸಾಹಿತ್ಯ ಶಾರದೆ ಎಂಬ ಬಿರುದನ್ನು ನೀಡಿದಾಗ ಅವರ ಸರಳತೆ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದೆವು ಎಂದು ಸ್ಮರಿಸಿದರು.
ಸಾಹಿತ್ಯ ತಮ್ಮೊಳಗೆ ಇರುತ್ತದೆ, ವಿಚಾರಗಳು ಬೆಳಕು ಚೆಲ್ಲುತ್ತದೆ, ಬರವಣಿಗೆಗೆ ಬಿಗಿ ಭಾಷಾ ಕೌಶಲ್ಯತೆ, ಪದಗಳ ವಿಶೇಷತೆಯೇ ಬೇಕು ಎಂಬುದಿಲ್ಲ. ಸರಳ ಸಾಮಾನ್ಯ ಭಾಷೆಯಲ್ಲಿದ್ದರೂ ಸರಾಗವಾಗಿ ಓದುವಂತೆ, ತಿಳಿಯುವಂತೆ, ಮನಮುಟ್ಟುವಂತೆ ಇದ್ದರೆ ಸಾಹಿತ್ಯ ಲೋಕಕ್ಕೆ ಒಂದು ಕೊಡುಗೆಯಾಗುತ್ತದೆ. ಸಾಹಿತ್ಯ ಕ್ಷೇತ್ರ ಸ್ವರಗುವುದಿಲ್ಲ. ಹಸಿವಿಗೆ ಊಟ ಬೇಕು, ಅನ್ನ ತಟ್ಟೆಯಲ್ಲಿ ಇರುತ್ತದೆ, ಬದುಕಿಗೆ ಜ್ಞಾನ ಬೇಕು, ಅದು ಪುಸ್ತಕದಲ್ಲಿರುತ್ತದೆ. ಜೀವನದಲ್ಲಿ ಸಂತೋಷವಾಗಿರಲು ಲಲಿತ ಕಲೆಗಳಿಗೆ ಮಾರು ಹೋಗಬೇಕು. ಎಲ್ಲಕ್ಕೂ ಸಾಹಿತ್ಯ ಲೋಕ ಪ್ರೇರಕ ಎಂದು ಖ್ಯಾತ ಸಾಹಿತಿ, ಬರಹಗಾರ, ಕವಿಯಾಗಿ ಮಕ್ಕಳಿಗೆ, ಯುವಕರಿಗೆ, ಸ್ವಾಮೀಜಿಗಳಿಗೂ ಸೇರಿದಂತೆ ಎಲ್ಲಾ ಕ್ಷೇತ್ರದವರಿಗೂ ಪ್ರಿಯರಾಗಿ ಸರಳ ವ್ಯಕ್ತಿತ್ವ ಸಜ್ಜನಿಕೆಯ ನಡೆಯ ತೇಜಸ್ಸಿನ ಸರಳ ಸಂತರಾಗಿ ತಮ್ಮ ಮನೆಯನ್ನೇ ಸಾಹಿತ್ಯ ಮಂದಿರವನ್ನಾಗಿಸಿ ಸಾಹಿತ್ಯ ಕ್ಷೇತ್ರದ ಚೇತನಕಾರಿಯಾಗಿದ್ದ ವಾಚಸ್ಪತಿ ಡಾ. ಕವಿತಾ ಕೃಷ್ಣ ರವರಿಗೆ ಅನಂತ ನಮನ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್ ವಹಿಸಿ ಮಾತನಾಡಿ, ಇರುವೆಗಳ ಸಾಲು ಸಹಭಾಗಿತ್ವ, ಒಗ್ಗಟ್ಟನ್ನು ತೋರಿಸುತ್ತದೆ, ತೆನೆಯಾದ ಸಸಿಗಳು ಬಾಗುತ್ತವೆ. ಗೊನೆಯಾಗಿ ಬಾಳೆ ಬಾಗುತ್ತದೆ, ಆದರೆ ಮನುಷ್ಯ ತಾವು ಬೆಳೆಯುತ್ತ ಬೀಗುತ್ತಾನೆ ಎಂಬ ಅವರ ಮಾತುಗಳನ್ನು ನೆನೆದು ಅವರ ಕ್ಷೇತ್ರ ವ್ಯಾಪ್ತಿಯ ಸೇವೆಯ ಬಗ್ಗೆ ಮಾತನಾಡಿದರು.
ಪ್ರೇಮ, ಪ್ರಶಾಂತ್, ಶ್ರೀಧರ್, ಹೇಮಲತಾ, ತಾಲೂಕು ಚುಟುಕು ಸಾಹಿತ್ಯ ಅಧ್ಯಕ್ಷ ಶಂಕರಾಚಾರ್, ಗ್ರಂಥಾಲಯದ ದರ್ಶನ್ ಮತ್ತಿತರರು ಕವನ ವಾಚಿಸಿ ಕವಿತಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಪ್ರಗತಿ ಪ್ರಾರ್ಥನೆ, ಶ್ರೀಧರ್ ಸ್ವಾಗತ, ವಂದನೆ ಲತಾರಾಜು, ನಿರೂಪಣೆ ಪ್ರಶಾಂತ್ ಮಾಡಿದರು.ಚನ್ನರಾಯಪಟ್ಟಣದಲ್ಲಿ ಮಾಸಿಕ ನಮನ ಬಳಗದವರು ಆಯೋಜಿಸಿದ ಇತ್ತೀಚೆಗೆ ಅಗಲಿದ ಡಾ. ಕವಿತಾ ಕೃಷ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಕವನಗಳ ವಾಚನದ ೨೨ನೇ ಕಾರ್ಯಕ್ರಮದಲ್ಲಿ ಡಾ.ಕವಿತಾ ಕೃಷ್ಣ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.