ಸಾಧಿಸುವ ಛಲಕ್ಕೆ ಗಡಿ, ಭಾಷೆಯ ಹಂಗಿಲ್ಲ ಎಂಬುದನ್ನು ಕೇರಳ ಮೂಲದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕಾವ್ಯ ಸಾಬೀತುಪಡಿಸಿದ್ದಾರೆ.

ಉಳ್ಳಾಲ: ಸಾಧಿಸುವ ಛಲಕ್ಕೆ ಗಡಿ, ಭಾಷೆಯ ಹಂಗಿಲ್ಲ ಎಂಬುದನ್ನು ಕೇರಳ ಮೂಲದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕಾವ್ಯ ಸಾಬೀತುಪಡಿಸಿದ್ದಾರೆ. ಮಂಗಳೂರು ವಿವಿಯ ಸ್ನಾತಕೋತ್ತರ ಪದವಿ (ಎಂಎ) ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಳ್ಳುವ ಜೊತೆಗೆ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಹಿನ್ನೆಲೆ ಮತ್ತು ಶಿಕ್ಷಣ: ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಗಾಡ್ ಮೂಲದ ಕಾವ್ಯ, ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು (ಎಸ್ಸೆಸ್ಸೆಲ್ಸಿ) ಹಾಗೂ ಪಿಯುಸಿಯನ್ನು ಕೇರಳದಲ್ಲೇ ಪೂರೈಸಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಆಗಮಿಸಿ ಮಂಗಳೂರು ರಥಬೀದಿಯಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಬಿಎ ಮುಗಿಸಿದರು.

ಕೇರಳದಲ್ಲಿ ಬೆಳೆದರೂ ಕನ್ನಡ ಮತ್ತು ತುಳು ಭಾಷೆ ಮೇಲೆ ಇವರಿಗಿರುವ ಹಿಡಿತ ಅದ್ಭುತ. ನಿರರ್ಗಳವಾಗಿ ಈ ಎರಡೂ ಭಾಷೆಗಳಲ್ಲಿ ಮಾತನಾಡುವ ಇವರ ಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಪಠ್ಯಕ್ಕೆ ಸೀಮಿತವಾಗದೆ, ಎನ್‌ಜಿಒ (ಸ್ವಯಂ ಸೇವಾ ಸಂಸ್ಥೆ) ಒಂದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಕಣಚೂರು ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ.

ಮುಂದೆ ಪಿಎಚ್ ಡಿ ಸಂಶೋಧನೆ ನಡೆಸಿ, ಅಧ್ಯಾಪಕಿಯಾಗಿ ವೃತ್ತಿ ಜೀವನ ರೂಪಿಸಿಕೊಳ್ಳುವ ಜೊತೆಗೆ ಸಮಾಜ ಸೇವೆ ಮುಂದುವರಿಸುವ ದೊಡ್ಡ ಕನಸು ಹೊಂದಿದ್ದಾರೆ.

ಬಡತನ ಮೆಟ್ಟಿ ಬಂಗಾರ ಗೆದ್ದ ವಿದ್ಯಾರ್ಥಿನಿ: ಬಂಟ್ವಾಳ‌ ಮಣಿನಾಲ್ಕೂರಿನ ಸಂಧ್ಯಾ ಮನೆಯಲ್ಲಿ ಬಡತನವಿದ್ದರೂ ಸ್ನಾತಕೋತ್ತರ ಶಿಕ್ಷಣದಲ್ಲಿ ಚಿನ್ನದಂಥ ಸಾಧನೆ ತೋರಿದ್ದಾರೆ. ಮಂಗಳೂರು ವಿವಿಯಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಕನ್ನಡ ವಿಷಯದಲ್ಲಿ ಮೊದಲ‌ ರ್‍ಯಾಂಕ್ ನೊಂದಿಗೆ ಚಿನ್ನದ ಪದಕ ಹಾಗೂ ಏಳು ನಗದು ಪುರಸ್ಕಾರಕ್ಕೆ ಈಕೆ ಭಾಜನರಾಗಿದ್ದಾರೆ.ಮಣಿನಾಲ್ಕೂರಿನ ಮೇಲಿನ ನೈಬೇಲಿನ ನೀಲಯ್ಯ ನಾಯ್ಕ ಹಾಗೂ ಬೇಬಿ ದಂಪತಿ ಪುತ್ರಿ ಸಂದ್ಯಾ ಎಸ್ ವಿಎಸ್ ಕಾಲೇಜಿನ ಬಿಎಸ್ಸಿಯಲ್ಲಿ ಪದವಿ ಮಾಡಿದ್ದರೂ ಸಾಹಿತ್ಯದ ಆಸಕ್ತಿ ವಿವಿಯ ಕನ್ನಡ ವಿಭಾಗದತ್ತ ಬರುವಂತೆ ಮಾಡಿತ್ತು. ತಂದೆ ಕೂಲಿ ಕೆಲಸ, ತಾಯಿ ಬೀಡಿ ಕಟ್ಟಿ ಜೀವನ ಮಾಡುತ್ತಾರೆ. ಇದರ ಜೊತೆಗೆ ಜೀವನೋಪಾಯಕ್ಕೆ ಮನೆಯಲ್ಲಿ ನಾಲ್ಕೈದು ದನಗಳೂ ಇವೆ.

‘ಮನೆಯಲ್ಲಿ ಕಷ್ಟದ ಬದುಕಿನ ನಡುವೆ ಅಮ್ಮನಿಗೆ ಅನುಕೂಲವಾಗಲೆಂದು 7ನೇ ತರಗತಿಯಲ್ಲಿ ಬೀಡಿ ಕಟ್ಟುವುದನ್ನು ಕಲಿತು ತಾಯಿಗೆ ಸಹಾಯ ಮಾಡುತ್ತಿದ್ದೆ. ವಿಶ್ವವಿದ್ಯಾಲಯಕ್ಕೆ ಹೋಗುವಾಗ ದಿನಾ ಬೆಳಗ್ಗೆ 5 ಗಂಟೆಗೆ ಎದ್ದು ದನದ ಹಟ್ಟಿಗೆ ತೆರಳಿ ಹಾಲು ಕರೆದು, ಮನೆ ಕೆಲಸ ಮಾಡಿ ಬಳಿಕ ಕೊಣಾಜೆ ಬಸ್ಸು ಹತ್ತುತ್ತಿದ್ದೆ. ಅಲ್ಲದೆ ನನ್ನ‌ ಶಿಕ್ಷಣದ ಕನಸಿಗಾಗಿ‌ ಅನೇಕ ಶಿಕ್ಷಕರೂ ಸಹಾಯ ಮಾಡಿದ್ದಾರೆ. ಮಂಗಳೂರು ವಿವಿಯಲ್ಲಿ ನನ್ನ ಉಪನ್ಯಾಸಕಿಯಾಗುವ ಕನಸಿಗೆ ಕನ್ನಡ ವಿಭಾಗದ ಪ್ರಾಧ್ಯಾಪಕರಿಂದ ಹೆಚ್ಚಿನ ಪ್ರೋತ್ಸಾಹ ದೊರೆತಿದೆ” ಎನ್ನುತ್ತಾರೆ ಸಂದ್ಯಾ.

ಮುಂದೆ ಪಿಎಚ್ ಡಿ ಮಾಡಿ ಉಪನ್ಯಾಸಕಿಯಾಗಬೇನ್ನುವ ಕನಸು ಹೊತ್ತುಕೊಂಡಿರುವ ಅವರು ಪ್ರಸ್ತುತ ಸರ್ಕಾರಿ ಬಿಇಡಿ‌ ಕಾಲೇಜಿನಲ್ಲಿ ಬಿಇಡಿ ವ್ಯಾಸಂಗ ಮಾಡುತ್ತಿದ್ದಾರೆ.