ಸ್ವಾರ್ಥ ಬಿಟ್ಟಾಗ ಜನರ ಯೋಚನಾ ಲಹರಿ ಬದಲಿಸಬಹುದು

| Published : May 24 2025, 12:39 AM IST / Updated: May 24 2025, 12:40 AM IST

ಸ್ವಾರ್ಥ ಬಿಟ್ಟಾಗ ಜನರ ಯೋಚನಾ ಲಹರಿ ಬದಲಿಸಬಹುದು
Share this Article
  • FB
  • TW
  • Linkdin
  • Email

ಸಾರಾಂಶ

ಕಲಾವಿದನಿಗೆ ಕೌಶಲ್ಯವೊಂದೇ ಕೆಲಸ ಮಾಡುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವರ ವ್ಯಕ್ತಿತ್ವವೂ ಕೆಲಸ ಮಾಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಕಲಾವಿದರು ಸ್ವಾರ್ಥವನ್ನು ಬಿಟ್ಟು ನಿಂತಾಗ ಮಾತ್ರ ಸಮಾಜದ ಜನರ ಯೋಚನಾ ಲಹರಿ ಬದಲಿಸಬಹುದು ಎಂದು ಕಲಾ ವಿನ್ಯಾಸಕ ಶಶಿಧರ ಅಡಪ ತಿಳಿಸಿದರು.

ಸಿದ್ಧಾರ್ಥನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ (ಕಾವಾ) ಕುಂಚಕಾವ್ಯ ಸಾಂಸ್ಕೃತಿಕ ಸಮಿತಿಯು ಆಯೋಜಿಸಿರುವ ಮೂರು ದಿನಗಳ ವಾರ್ಷಿಕ ಕಲಾ ಪ್ರದರ್ಶನವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಮೊದಲಿನಿದಂಲೂ ಕಲಾವಿದರಿಗೆ ಹಿಂಜರಿಕೆ ಎನ್ನುವುದು ಬಂದು ಬಿಟ್ಟಿದೆ. ಕಲಾವಿದರಿಗೆ ಹಿಂಜರಿಕೆ ಇರಬಾರದು. ಹಿಂಜರಿಕೆ ಇರುವವರು ಉತ್ತಮ ಕಲಾವಿದರು ಎಂದು ತಿಳಿಯಬಾರದು. ಹೀಗಾಗಿ, ಭವಿಷ್ಯದಲ್ಲಿ ಬರುವ ಕಲಾವಿದರು ಹಿಂಜರಿಕೆಯನ್ನು ಬಿಡಬೇಕು. ಕಲಾವಿದನಿಗೆ ತಿಳಿದಿರುವ ಕೌಶಲ್ಯ, ನೈಪುಣ್ಯ, ಮಾಡುವ ಕೆಲಸವೇ ಬೇರೆ, ತಾನೇ ಬೇರೆ ಎಂದು ತಿಳಿದುಕೊಳ್ಳಬಾರದು. ಇವೆಲ್ಲವೂ ನಿಮ್ಮ ವ್ಯಕ್ತಿತ್ವದ ಅಂಗ ಎಂದು ಅವರು ಹೇಳಿದರು.

ಕಲಾವಿದನಿಗೆ ಕೌಶಲ್ಯವೊಂದೇ ಕೆಲಸ ಮಾಡುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವರ ವ್ಯಕ್ತಿತ್ವವೂ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಿಮ್ಮ ವ್ಯಕ್ತಿತ್ವವನ್ನು ಕಲಾತ್ಮಕವಾಗಿರುವುದರ ಜೊತೆಗೆ ಆಧುನಿಕ ಜಗತ್ತಿಗೆ ಬೇಕಾದ ರೀತಿಯಲ್ಲಿ ಪ್ರಯತ್ನಿಸುವ ಅವಶ್ಯಕತೆಯನ್ನು ಸಮಾಜ ಕೇಳುತ್ತದೆ. ಇಂದಿನ ಸಮಾಜ ಮಾರಾಟದ ಪ್ರಪಂಚವಾಗಿದೆ. ಇಲ್ಲಿ ಎಷ್ಟೇ ಚೆನ್ನಾಗಿರುವ ವಸ್ತು ಇದ್ದರೂ ಅದಕ್ಕೊಂದು ಬಣ್ಣ, ಬೆಡಗು ಇದ್ದರೆ ಸಮಾಜದಲ್ಲಿ ಸುಂದರವಾಗಿ ಕಾಣುತ್ತದೆ ಎಂದು ಅವರು ತಿಳಿಸಿದರು.

ಕಲೆಯ ಜತೆಗೆ ಸಂವಹನ ಕೌಶಲ್ಯ, ಬರವಣಿಗೆಯ ಮುಖಾಂತರ ಹೇಗೆ ಸಮಾಜದಲ್ಲಿ ನಿಮ್ಮ ಕಲೆಯನ್ನು ಗುರುತಿಸುವಂತೆ ಮಾಡುತ್ತೀರಿ ಎಂಬುದನ್ನು ಗಮನಿಸಬೇಕು. ಇಂದು ಕಲೆ ವೈಯಕ್ತಿಕ ಆಧಾರದ ಮೇಲೆ ನಿಲ್ಲುವುದಿಲ್ಲ. ನಾಯಕತ್ವದ ಗುಣವೂ ಇರಬೇಕು. ಈ ನಿಟ್ಟಿನಲ್ಲಿ ಒಂದು ಸಣ್ಣ ಸಮುದಾಯದ ಜೊತೆಗೂ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾವಾ ಡೀನ್ ಎ. ದೇವರಾಜು ಮಾತನಾಡಿ, ಕಾವಾ ಎಂದರೆ ಕಲೆಯನ್ನೇ ತುಂಬಿಕೊಂಡಿರುವ ಆವರಣ. ಕಾವಾ ಕೇವಲ ಮೈಸೂರು ಜಿಲ್ಲೆ, ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾವಾ ಘಮಲು ದೇಶಾದ್ಯಂತ ಹರಡಿದೆ. ಇತರೆ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಕಾವಾ ಉತ್ತಮವಾದ ಮುಕ್ತವಾದ ವಾತಾವರಣ ಇದೆ. ಇದನ್ನು ಇಲ್ಲಿಯ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾವಾ ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಶೈಕ್ಷಣಿಕ ಸಂಯೋಜಕ ಎ.ಪಿ. ಚಂದ್ರಶೇಖರ್, ಕುಂಚ ಕಾವ್ಯ ವಿದ್ಯಾರ್ಥಿ ಸಮಿತಿಯ ಕಾರ್ಯದರ್ಶಿ ಸ್ಕಂದ ಆರ್. ಭಾರದ್ವಾಜ್, ಉಪ ಕಾರ್ಯದರ್ಶಿ ಹೇಮಂತ್ ಮೊದಲಾದವರು ಇದ್ದರು.