ಸಮಾಜಕ್ಕೆ ಕಾಯಕ ಶರಣರ ಕೊಡುಗೆ ಅಪಾರ

| Published : Feb 12 2025, 12:34 AM IST

ಸಾರಾಂಶ

ರಾಮನಗರ: ಕಾಯಕ ನಿಷ್ಠೆ ಹನ್ನೆರಡನೇ ಶತಮಾನದ ಶರಣರ ವೈಚಾರಿಕ ಪ್ರಪಂಚದ ವಿಶಿಷ್ಟ ಕಾಣಿಕೆ. ಅವರು ಕಂಡುಕೊಂಡಿರುವ ಆದರ್ಶ ಮತ್ತು ಅರ್ಥವ್ಯಾಪ್ತಿ ಇಡೀ ವಿಶ್ವವನ್ನೇ ಒಳಗೊಂಡಂತಹುದು. ಪ್ರತಿಯೊಬ್ಬ ಜೀವಿಯೂ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇರಬೇಕು ಎಂದು ರಂಗ ನಿರ್ದೇಶಕ ಡಾ. ಎಂ.ಬೈರೇಗೌಡ ಹೇಳಿದರು.

ರಾಮನಗರ: ಕಾಯಕ ನಿಷ್ಠೆ ಹನ್ನೆರಡನೇ ಶತಮಾನದ ಶರಣರ ವೈಚಾರಿಕ ಪ್ರಪಂಚದ ವಿಶಿಷ್ಟ ಕಾಣಿಕೆ. ಅವರು ಕಂಡುಕೊಂಡಿರುವ ಆದರ್ಶ ಮತ್ತು ಅರ್ಥವ್ಯಾಪ್ತಿ ಇಡೀ ವಿಶ್ವವನ್ನೇ ಒಳಗೊಂಡಂತಹುದು. ಪ್ರತಿಯೊಬ್ಬ ಜೀವಿಯೂ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇರಬೇಕು ಎಂದು ರಂಗ ನಿರ್ದೇಶಕ ಡಾ. ಎಂ.ಬೈರೇಗೌಡ ಹೇಳಿದರು.

ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣರು ಎಲ್ಲರಿಗೂ ಉದ್ಧಾರದ ಮಾರ್ಗಗಳನ್ನು ತೋರಿಸಬಲ್ಲ ಪೂರ್ಣದೃಷ್ಟಿಯ ಆದರ್ಶ ಸಮಾಜದ ಚಿತ್ರವನ್ನು ಕಂಡವರು. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ. ಅದನ್ನು ನಿರ್ವಹಿಸುವ ಮನೋಧರ್ಮದಲ್ಲಿದೆ. ಎಲ್ಲ ರೀತಿಯ ಉದ್ಯೋಗಗಳಿಂದ ಸಮಾಜ ಸ್ವಯಂಪೂರ್ಣವಾಗಬೇಕು. ಸಮೃದ್ಧವಾಗಬೇಕು ಎಂದರು.

ವ್ಯಕ್ತಿ ಎಲ್ಲಿಯೇ ಇರಲಿ ಬಡವ ಬಲ್ಲಿಗನೆಂಬ ಬೇಧವಿಲ್ಲದೆ, ಸ್ತ್ರೀ ಪುರುಷರೆಂಬ ತಾರತಮ್ಯವಿಲ್ಲದೆ ಎಲ್ಲರೂ ಜೀನವದ ಗುರಿಯನ್ನು ತಮ್ಮದೇ ಮಾರ್ಗದಲ್ಲಿ ಸಾಧಿಸುವ ಸಮಾಜ ಸರ್ವ ಸಮಾನತೆಯನ್ನು ಸಾಧಿಸುತ್ತದೆ ಎಂಬುದನ್ನು ಶರಣರು ತಮ್ಮ ಕಾಯಕನಿಷ್ಠೆಯನ್ನು ಮೆರೆಯುತ್ತಲೇ ಇಡೀ ವಿಶ್ವಕ್ಕೆ ಸಾರಿದರು ಮತ್ತು ಅದನ್ನು ಸಾಧಿಸಿ ತೋರಿಸಿದರು ಎಂದು ಹೇಳಿದರು.

ಕಾಯಕ ಎಂಬುದು ಕಾಯಾ ವಾಚಾ ಮನಸಾ ದೇಹವನ್ನು ದಂಡಿಸಿದಾಗ ದೊರೆಯುವ ಆನಂದವಾಗಿದೆ. ಯಾವುದೇ ಕಾಯಕ ಮೇಲಲ್ಲ ಯಾವುದೇ ಕಾಯಕ ಕೀಳಲ್ಲ ಎಂಬ ಮನೋದಾರ್ಢ್ಯತೆಯೊಂದಿಗೆ ಕಾಯಕ ನಿಷ್ಠರಾಗಿ ದೇಹವನ್ನು ದಂಡಿಸಿ, ದೇವನನ್ನು ಕಾಣುವ ಈ ಬಗೆಯ ಅನೇಕ ಕಾಯಕ ಸಂಸ್ಕೃತಿಯ ರಾಯಭಾರಿಗಳಂತಿರುವ ಶಿವಶರಣರನ್ನು ಹನ್ನೆರಡನೇ ಶತಮಾನದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಮುಂತಾದವರನ್ನು ಉಲ್ಲೇಖಿಸಬಹುದು. ಇವರೆಲ್ಲರ ಆದರ್ಶಮಯ ಜೀವನ ತಿಳಿಯುವ ಅದನ್ನು ಅನುಷ್ಠಾನಕ್ಕೆ ತರುವ ಮೂಲಕ ಅವರ ಬದುಕಿನ ದರ್ಶನದೊಂದಿಗೆ ವಚನ ಸಾಹಿತ್ಯದ ಸಾರವನ್ನು ತಿಳಿಯುವ ಅವಶ್ಯಕತೆಯಿದೆ ಎಂದು ಬೈರೇಗೌಡ ತಿಳಿಸಿದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗಾಣಕಲ್ ನಟರಾಜ್, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ದೀಪಕ್ ಕುಮಾರ್ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸತೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತಾ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಕುಂಬಾಪುರ ಬಾಬು, ಸಮುದಾಯದ ಮುಖಂಡರುಗಳಾದ ಜಯಸಿಂಹ, ಹೊನ್ನಿಗನಹಳ್ಳಿ ಸಿದ್ದರಾಜು ಉಪಸ್ಥಿತರಿದ್ದರು.

11ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಶ್ರೀ ಕಾಯಕ ಶರಣರ ಜಯಂತಿ ಆಚರಿಸಲಾಯಿತು.