ಕನ್ನಡಪ್ರಭ ವಾರ್ತೆ ಗುಬ್ಬಿ

ಕಾಯಕ ಹಾಗೂ ದಾಸೋಹ ವೀರಶೈವ ಲಿಂಗಾಯತ ಧರ್ಮದ ಮೂಲ ಸಂಸ್ಕೃತಿಗಳಾಗಿದ್ದು, ಪ್ರಸ್ತುತ ದಿನಮಾನದಲ್ಲಿ ಶರಣರ ನುಡಿಯಂತೆ ಕೆಲಸ ಮಾಡಿ ದುಡಿದು ಹಂಚಿ ತಿನ್ನುವ ಗುಣ ಬೆಳೆಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜ ಕಟ್ಟಬಹುದು ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಹೊರವಲಯ ಹೇರೂರು ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯಭವನದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ನೌಕರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಸಮಾಜದ ಜೊತೆ ಬೆರೆತು ಸಾಗುವ ನಮ್ಮ ವೀರಶೈವ ಲಿಂಗಾಯತ ಸಮಾಜದಲ್ಲಿನ ರಾಜಕಾರಣಿಗಳು, ಅಧಿಕಾರಿ ವರ್ಗ ಮತ್ತು ಸಿರಿವಂತ ವರ್ಗ ಒಗ್ಗಟ್ಟಾಗಿ ಸಮಾಜ ಕಟ್ಟುವ ಕೆಲಸ ಮಾಡಿದರೆ ಮುಂದೆ ವಿಶ್ವದ ಗಮನ ಸೆಳೆಯುವ ಸಮಾಜವಾಗಿ ಗುರುತಿಸಿಕೊಳ್ಳುತ್ತದೆ ಎಂದರು. ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನೌಕರರ ಸಂಘ ವೀರಶೈವ ಯುವ ಪ್ರತಿಭೆಗೆ ಬಲ ತುಂಬುವ ಕೆಲಸ ಮಾಡುತ್ತಿದೆ. ಶಿಕ್ಷಣ ಜೊತೆಗೆ ಮಕ್ಕಳು ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಂಡು ಸಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಮೂರು ಶಕ್ತಿ ಅಗತ್ಯವಿದೆ. ಗ್ರಹಣ, ಸ್ಮರಣ ಹಾಗೂ ಚಿಂತನಾ ಶಕ್ತಿ ಬೆಳೆಸಿಕೊಂಡಲ್ಲಿ ಮುಂದಿನ ಭವಿಷ್ಯ ಸುಂದರವಾಗುತ್ತದೆ. ನಮ್ಮಲ್ಲಿ ರಾಜಕೀಯ ಕೊರತೆ ಈಗ ಕಾಣುತ್ತಿದೆ. ಒಗ್ಗಟ್ಟು ಕೊರತೆ ಸಹ ಎದ್ದು ಕಾಣುತ್ತಿದೆ ಎಂದು ವಿಷಾದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ ನೌಕರರ ಸಂಘ ಪ್ರತಿಭಾವಂತ ಮಕ್ಕಳಿಗೆ ಗುರುತಿಸಿ ಸನ್ಮಾನಿಸುವುದು ಸಾರ್ಥಕ ಕೆಲಸ. ಈ ಜೊತೆಗೆ ಕನಿಷ್ಠ ಅಂಕಗಳಿಸಿದ ಮಕ್ಕಳಿಗೂ ಭವಿಷ್ಯ ರೂಪಿಸುವ ಕೆಲಸ ಮಾಡಬೇಕಿದೆ. ಒಳ್ಳೆಯ ಮಾಡಿ ಇಲ್ಲವಾದಲ್ಲಿ ಸಮಾಜ ಕಟ್ಟುವ ಕೆಲಸಕ್ಕೆ ಕಳ್ಳುಮುಳ್ಳು ಹಾಕುವ ಕೆಲಸ ಮಾತ್ರ ಯಾರೂ ಮಾಡಬೇಡಿ ಎಂದು ಮನವಿ ಮಾಡಿದರು. ಕೆಎಎಸ್ ಅಧಿಕಾರಿ ಎಚ್.ಪಿ.ಸೋಮಶೇಖರ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಸಾಮಾನ್ಯ ಮೀಸಲಿನಲ್ಲಿ ಹೋರಾಟ ಮಾಡಬೇಕಿದೆ. ಜನರಲ್ ಕೆಟಗರಿ ಕೇಂದ್ರದಲ್ಲಿರುವ ಕಾರಣ ಇಡಬ್ಲ್ಯೂಎಸ್ ಮೂಲಕ ಶೇಕಡಾ 10 ಮೀಸಲು ಪಡೆದು ಉನ್ನತ ಶಿಕ್ಷಣ ಪಡೆಯಬೇಕಿದೆ ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಎಚ್.ಸಿ.ಸೋಮಶೇಖರ್ ವಹಿಸಿದ್ದರು. ಡಾ.ನವ್ಯಾಬಾಬು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಶಶಿ ಹುಲಿಕುಂಟೆ, ಮಹಾಸಭಾ ತಾಲೂಕು ಉಪಾಧ್ಯಕ್ಷ ವಿಶ್ವಾರಾಧ್ಯ, ಬಿ.ಜಿ.ದಿವ್ಯಾಪ್ರಕಾಶ, ಪಪಂ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮಲಾಪುರ ಉಮೇಶ್, ನಿವೃತ್ತ ಪ್ರಾಚಾರ್ಯ ಪ್ರಸನ್ನ, ಉದ್ಯಮಿ ಬೆಣಚಿಗೆರೆ ರುದ್ರೇಶ್, ಕಸಾಪ ತಾಲೂಕು ಅಧ್ಯಕ್ಷ ಯತೀಶ್, ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ.ಷಡಕ್ಷರಿ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿ.ದಯಾನಂದ್, ಖಜಾಂಜಿ ರೇಣುಕಪ್ರಸಾದ್, ಗೌರವಾಧ್ಯಕ್ಷ ನಿಜಾನಂದಮೂರ್ತಿ, ಹಿರಿಯ ಉಪಾಧ್ಯಕ್ಷ ಅರುಣಕುಮಾರ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.