ಸಮಾಜ ತಿದ್ದುವಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಸಿದ್ರಾಮಪ್ಪ

| Published : Feb 11 2024, 01:48 AM IST

ಸಾರಾಂಶ

ಕಾಯಕ ಶರಣರು ಎಂದು ಕರೆಯಿಸಿಕೊಳ್ಳುವ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡವರು.

ಕುಷ್ಟಗಿ: ಕಾಯಕ ಶರಣರು ತಮ್ಮ ಕಾಯಕ, ದಾಸೋಹ ಹಾಗೂ ವಚನಗಳಿಂದ ಸಮಾಜವನ್ನು ತಿದ್ದುವಲ್ಲಿ ಅವರ ಕೊಡುಗೆ ಅಪಾರ ಎಂದು ಮುಖ್ಶಶಿಕ್ಷಕ ಸಿದ್ರಾಮಪ್ಪ ಅಮರಾವತಿ ಹೇಳಿದರು.ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಕಾಯಕ ಶರಣರ ಜಯಂತಿ ಅಂಗವಾಗಿ ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಕಾಯಕ ಶರಣರು ಎಂದು ಕರೆಯಿಸಿಕೊಳ್ಳುವ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡವರು. ಕಾಯಕದ ಮೇಲೆ ಜಾತಿ ಮಾಡಬಾರದು. ಯಾವ ಕಾಯಕವೂ ದೊಡ್ಡದಲ್ಲ, ಮನಸ್ಸಿನಿಂದ ಮಾಡುವ ಯಾವ ಕಾಯಕವೂ ಸಣ್ಣದಲ್ಲ ಎಂದು ಸಾರಿದ ಮಹಾನಭಾವರು ಈ ಕಾಯಕ ಶರಣರು ಎಂದು ಅಭಿಪ್ರಾಯಪಟ್ಟರು.ಮಾದಾರ ಚನ್ನಯ್ಯ ತಮ್ಮ ಕಾಯಕದಿಂದಲೇ ಶಿವನನ್ನು ಒಲಿಸಿಕೊಂಡು, ಅಂಬಲಿಯನ್ನು ಸೇವೆಗೆ ನೀಡಿದ್ದ ಮಹಾನ್ ಕಾಯಕಯೋಗಿ ಆಗಿದ್ದಾರೆ. ತಮ್ಮ ವಚನಗಳ ಮೂಲಕ ಸಮಾಜದ ಅನೇಕ ಅಸಮಾನತೆಗಳನ್ನು ದೂರ ಮಾಡುವಲ್ಲಿ ಮಾದಾರ ಚನ್ನಯ್ಯ ಅಗ್ರ ಗಣ್ಯರಾಗಿದ್ದಾರೆ ಎಂದು ಹೇಳಿದರು.ಮಾದಾರ ಧೂಳಯ್ಯ ಒಬ್ಬರು ಪ್ರಮುಖ ವಚನಕಾರರಾಗಿದ್ದರು. ಇವರು ತಮ್ಮ ಜೀವನದಲ್ಲಿ ಒಟ್ಟು 300ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಡೋಹರ ಕಕ್ಕಯ್ಯ ಅವರು ಬರೆದ ಒಟ್ಟು ವಚನಗಳಲ್ಲಿ ಸಿಕ್ಕಿದ್ದು ಕೇವಲ ಆರು ವಚನಗಳು ಮಾತ್ರ. ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಇಬ್ಬರು ಮಹಾನ್ ವ್ಯಕ್ತಿಗಳಾಗಿದ್ದರು. ಸಮಗಾರ ಹರಳಯ್ಯ ಒಟ್ಟು 366 ವಚನಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ಪರಸಪ್ಪ ಸರೂರು, ಶಿಕ್ಷಕ ದೊಡ್ಡಬಸವ ಪಾಟೀಲ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಇದ್ದರು.