ಸಾರಾಂಶ
ಧಾರವಾಡ:
ರಂಗಭೂಮಿಗೆ ಪ್ರಾಚೀನ ಇತಿಹಾಸವಿದೆ. ಜನಪದ ರಂಗಭೂಮಿ ಪ್ರಾಚೀನವಾದುದು ಎಂದು ಚಿಂತಕ ಪ್ರೊ. ಚೆ. ರಾಮಸ್ವಾಮಿ ಹೇಳಿದರು.ಜಿಲ್ಲಾ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಮುದಾಯ ಸಂಯುಕ್ತವಾಗಿ ಆಯೋಜಿಸಿದ್ದ ದಿ. ಬಸಪ್ಪ ಯಲ್ಲಪ್ಪ ಕಲ್ಲೂರ ದತ್ತಿ, ಬಸಪ್ಪ ವೀರಭದ್ರಪ್ಪ ಸೊರಟೂರ ದತ್ತಿಯಲ್ಲಿ ಉಪನ್ಯಾಸ ನೀಡಿದರು.
ಕಾವ್ಯಮಿಮಾಂಸೆಯಲ್ಲಿ ವ್ಯಾಕರಣ, ಕಾವ್ಯ, ನಾಟಕಗಳ ಲಕ್ಷಣವಿದೆ. ಶಾಸ್ತ್ರಗಳನ್ನು ವ್ಯಾಕರಣವೆಂದೂ, ಭಾವನಾತ್ಮಕತೆಯನ್ನು ಕಾವ್ಯವೆಂದು, ಅಭಿನಯವನ್ನು ನಾಟಕವೆಂದು ಕರೆಯುತ್ತಿದ್ದ ಗ್ರೀಕರ, ರೋಮನರ ನಾಟಕ ರೀತಿ ಲೌಕಿಕವಾಗಿದ್ದರೆ, ಭಾರತೀಯ ನಾಟಕ ಪರಂಪರೆ ಧರ್ಮ, ನೀತಿ ಮಾನವೀಯತೆಗೆ ಒತ್ತು ಕೊಟ್ಟಿತ್ತೆಂದು ಎಂದರು.ವೃತ್ತಿ ರಂಗಭೂಮಿ, ಜನಪದ ರಂಗಭೂಮಿ, ಹವ್ಯಾಸಿ ರಂಗಭೂಮಿ, ಆಕಾಶವಾಣಿ ಮತ್ತು ದೂರದರ್ಶನ ನಾಟಕಗಳು, ಬೀದಿ ನಾಟಕಗಳು, ಕಾಲಾನುಕ್ರಮದಲ್ಲಿ ಹುಟ್ಟಿ ಜನಮಾನಸದಲ್ಲಿ ನೆಲೆ ನಿಂತಿವೆ. ಪ್ರಸ್ತುತ ಮೊಬೈಲ್, ಇಂಟರ್‌ನೆಟ್‌ನಿಂದಾಗಿ ರಂಗಭೂಮಿ ಪೋಷಕರಿಲ್ಲದೆ ಸೊರಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎ. ಮುರಿಗೆಪ್ಪ, ಡಾ. ಗುರುಲಿಂಗ ಕಾಪಸೆ ಅವರ ವ್ಯಕ್ತಿತ್ವ, ಸಾಹಿತ್ಯ ರಚನೆ, ಕಿರಿಯರಿಗೆ ಮಾಡುವ ರೀತಿ, ಬೋಧಕರು ಹೇಗೆ ಇರಬೇಕೆಂಬುದಕ್ಕೆ ಮಾದರಿಯಾಗಿದ್ದರು ಎಂದರು. ದತ್ತಿ ಉಪನ್ಯಾಸಗಳು ಕನ್ನಡ ಸಂಸ್ಕೃತಿ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾಹಿತ್ಯದ ಚಟುವಟಿಕೆಗಳಿಗೆ ಸಾರ್ವಜನಿಕರು, ಸರ್ಕಾರ ಉದಾರವಾಗಿ ಧನಸಹಾಯ ಮಾಡಬೇಕೆಂದು ಪ್ರತಿಪಾದಿಸಿದರು.ಇದೇ ವೇಳೆ ದತ್ತಿ ದಾನಿಗಳನ್ನು, ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ದತ್ತಿ ದಾನಿಗಳ ಪರವಾಗಿ ಡಾ. ಶಿವಾನಂದ ಕಲ್ಲೂರ ಮಾತನಾಡಿದರು. ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ. ವೀಣಾ ಬಿರಾದಾರ, ಸುನೀಲ ಪತ್ತಿ, ಡಾ. ಜ್ಯೋತಿಲಕ್ಷ್ಮಿ, ಕಿರಣ ಸಿದ್ಧಾಪೂರ ಮಾತನಾಡಿದರು. ಬಿ.ಐ. ಈಳಿಗೇರೆ ವಿಶ್ವ ರಂಗಭೂಮಿಯ ಸಂದೇಶ ವಾಚಿಸಿದರು. ಪ್ರಮಿಳಾ ಜಕ್ಕಣ್ಣವರ ಪ್ರಾರ್ಥಿಸಿದರು, ಪ್ರೊ. ಕೆ.ಎಸ್. ಕೌಜಲಗಿ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಎಸ್.ಎಸ್. ದೊಡಮನಿ ವಂದಿಸಿದರು.