ಅಭಿವೃದ್ಧಿಗೆ ಮುನ್ನುಡಿ ಬರೆದ ಕಾಯಕಯೋಗಿ ಬಸವಣ್ಣ: ಶಿವಬಸವ ಮಹಾ ಸ್ವಾಮೀಜಿ

| Published : May 08 2025, 12:36 AM IST

ಅಭಿವೃದ್ಧಿಗೆ ಮುನ್ನುಡಿ ಬರೆದ ಕಾಯಕಯೋಗಿ ಬಸವಣ್ಣ: ಶಿವಬಸವ ಮಹಾ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕಿರಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣರಾದರು. ಕಾಯಕದಿಂದ ಕೈಲಾಸ ವಾಣಿಯನ್ನು ಮೈಗೂಡಿಸಿಕೊಂಡು 12ನೇ ಶತಮಾನದಲ್ಲಿ ಪ್ರಾಮಾಣಿಕತೆಯನ್ನು ತೋರಿಸಿದ ಮಹಾನ್ ವ್ಯಕ್ತಿ.

ಕನ್ನಡಪ್ರಭ ವಾರ್ತೆ ಮದ್ದೂರು

12ನೇ ಶತಮಾನದಲ್ಲಿ ಹಲವಾರು ವಚನ ಸಾಹಿತ್ಯ ರಚಿಸಿ ಸಾಮಾಜಿಕ ಅಭಿವೃದ್ಧಿಗೆ ಮುನ್ನುಡಿ ಬರೆದ ಬಸವಣ್ಣ ಕಾಯಕಯೋಗಿ ಎಂದು ಬೇಬಿಬೆಟ್ಟ ರಾಮಯೋಗೇಶ್ವರ ಮಠದ ಶಿವಬಸವ ಮಹಾ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.

ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ವೀರಶೈವ ಅಭಿವೃದ್ಧಿ ಸಂಸ್ಥೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘ ಮತ್ತು ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವದಲ್ಲಿ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.

ಬಸವಣ್ಣನವರನ್ನು ಜಗಜ್ಯೋತಿ, ಬಸವೇಶ್ವರ, ಕ್ರಾಂತಿಯೋಗಿ, ಭಕ್ತಭಂಡಾರಿ, ಮಹಾಮಾನವತಾವಾದಿ ಎಂದು ಕರೆಯುವ ಜತೆಗೆ ಕಾಯಕ, ನಿಷ್ಠೆ, ಧರ್ಮದ ಬುನಾದಿಯಾಗಬೇಕೆಂದು ಬಲವಾಗಿ ನಂಬಿದವರೆಂದು ಬಣ್ಣಿಸಿದರು.

ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕಿರಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣರಾದರು. ಕಾಯಕದಿಂದ ಕೈಲಾಸ ವಾಣಿಯನ್ನು ಮೈಗೂಡಿಸಿಕೊಂಡು 12ನೇ ಶತಮಾನದಲ್ಲಿ ಪ್ರಾಮಾಣಿಕತೆಯನ್ನು ತೋರಿಸಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

ಇದೇ ವೇಳೆ ಮಡೇನಹಳ್ಳಿ ತೋಟದಾರ್ಯ ಮಠದ ಶ್ರೀ ಅರುಣಾಚಲ ಶ್ರೀಗಳು, ಎಸ್.ಐ.ಹೊನ್ನಲಗೆರೆ ರೇಣುಕಾಶ್ರಮ ಮಠದ ಶಿವಲಿಂಗಶಿವಾಚಾರ್ಯ ಕಾರ್ಯಕ್ರಮದ ಶರಣರನ್ನು ಕುರಿತು ಆಶೀರ್ವಚನ ನೀಡಿದರು. ವೈದ್ಯನಾಥಪುರ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ರೇಣುಕಾ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದವರನ್ನು ಗುರುತಿಸಿ ಕಾರ್ಯಕ್ರಮದ ವೇಳೆ ಅಭಿನಂದಿಸಿ ಗೌರವಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ, ಪುರಸಭೆ ಅಧ್ಯಕ್ಷೆ ಕೋಕಿಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಉದ್ಯಮಿ ಎಂ.ಆರ್.ಉಮಾಪತಿ, ಸಹಕಾರ ಸಂಘಗಳ ಉಪನಿಬಂಧಕರು ಎಚ್.ಆರ್.ನಾಗಭೂಷಣ್, ವೀರಶೈವ ಜಿಲ್ಲಾಧ್ಯಕ್ಷ ಎಸ್.ಆನಂದ್, ವೀರಶೈವ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಹೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಜಿ.ಗೌರಿಶಂಕರ್, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಸ್ವಾಮಿ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಪೇಟೆ ಬೀದಿ ಮೂಲಕ ಬಸವಣ್ಣನವರ ಭಾವಚಿತ್ರವನ್ನು ಸಾಂಸ್ಕೃತಿ ಕಲಾ ತಂಡಗಳೊಟ್ಟಿಗೆ ಮೆರವಣಿಗೆ ಕೈಗೊಂಡು ವೇದಿಕೆ ಕಾರ್ಯಕ್ರಮಕ್ಕೆ ಕರೆತರಲಾಯಿತು.