ವಿಜಯರಾಮೇಗೌಡರಿಗೆ ಬೂಕನಕೆರೆ, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಅವರು ಅಕ್ಕಿಹೆಬ್ಬಾಳು, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಅಂಬರೀಶ್ ಅವರು ಶೀಳನೆರೆ ಹೋಬಳಿ, ಸುರೇಶ್ ಕಿಕ್ಕೇರಿ ಹೋಬಳಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಪಕ್ಷಕ್ಕೆ ಬರುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಲ್ಲ. ಇದರ ಬಗ್ಗೆ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ ನಾರಾಯಣಗೌಡರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗುಲ್ಲು ಹಬ್ಬಿತ್ತು. ಈಗ ಮತ್ತೆ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷದಲ್ಲಿ ತಮ್ಮ ಹಿಡಿತ ಬಲಗೊಳಿಸಿಕೊಳ್ಳಲು ನಾರಾಯಣಗೌಡರ ಬೆಂಬಲಿಗರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣಗೌಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಎನ್ನುವ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂರಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಶಾಸಕರಾಗಲು ಸಾಕಷ್ಟು ಮಂದಿ ನಾಯಕರು ಪಕ್ಷದಲ್ಲಿದ್ದಾರೆ. ನಮಗೆ ಕೆ.ಸಿ.ಎನ್ ಅವಶ್ಯಕತೆಯಿಲ್ಲ. ಗಾಳಿ ಸುದ್ದಿಯಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ನಿಷ್ಠಾವಂತ ಕಾಂಗ್ರೆಸ್ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎನ್ನುವ ಕೊರಗು ಕಾರ್ಯಕರ್ತರನ್ನು ಕಾಡುತ್ತಿದೆ. ಹೀಗಾಗಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿವಿಧ ಹುದ್ದೆಗಳಿಗೆ ಕಾರ್ಯಕರ್ತರನ್ನು ನಾಮಿನಿ ಮಾಡಿ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಮನ್ಮುಲ್, ಎಂಡಿಸಿಸಿ ಬ್ಯಾಂಕ್, ಪಿಎಲ್ ಡಿ ಬ್ಯಾಂಕ್ ಸೇರಿದಂತೆ ಹಲವು ಸಹಕಾರ ಸಂಘಗಳ ಚುನಾವಣೆಯಲ್ಲಿ ಪಕ್ಷ ಪ್ರಾಬಲ್ಯ ಸಾಧಿಸಿರುವುದೇ ಸಾಕ್ಷಿ ಎಂದರು.
ತಾಲೂಕಿನ 34 ಗ್ರಾಪಂಗಳಲ್ಲಿ ಕನಿಷ್ಠ 20 ಗ್ರಾಪಂಗಳು, 6 ಜಿಪಂ ಕ್ಷೇತ್ರಗಳಲ್ಲಿ ಕನಿಷ್ಠ 4, 16ಕ್ಕೂ ಹೆಚ್ಚು ತಾಪಂ ಸ್ಥಾನಗಳನ್ನು ಗೆದ್ದು ಪಕ್ಷದ ಸಾಮರ್ಥ್ಯ ಸಾಬೀತು ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಕಸಬಾ ಹೋಬಳಿಯ ನಾಯಕತ್ವವನ್ನು ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡರಾದ ಬಿ.ಎಲ್.ದೇವರಾಜು ವಹಿಸಲಿದ್ದಾರೆ ಎಂದು ತಿಳಿಸಿದರು.ವಿಜಯರಾಮೇಗೌಡರಿಗೆ ಬೂಕನಕೆರೆ, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಅವರು ಅಕ್ಕಿಹೆಬ್ಬಾಳು, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಅಂಬರೀಶ್ ಅವರು ಶೀಳನೆರೆ ಹೋಬಳಿ, ಸುರೇಶ್ ಕಿಕ್ಕೇರಿ ಹೋಬಳಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಸಂತೇಬಾಚಹಳ್ಳಿ ಹೋಬಳಿಗೆ ಹೊಸ ನಾಯಕತ್ವ ನೀಡಿ ಪಕ್ಷ ಗಟ್ಟಿಗೊಳಿಸುವ ಕೆಲಸ ಮಾಡಲಾಗುವುದು. 2028 ರ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರಬೇಕು ಎನ್ನುವ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಎಂದು ಹೇಳಿದರು.
ಈ ವೇಳೆ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಮುಖಂಡ ಎಂ.ಡಿ.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್.ಪ್ರವೀಣ್, ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ರಾಜಯ್ಯ, ಹರಿಹರಪುರ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಧರ್ ಸೇರಿದಂತೆ ಹಲವರಿದ್ದರು.