ಕೆಡಿಪಿ ಸಭೆಗಳು ಕೇವಲ ಕಾಗದದ ಮೇಲೆ ನಡೆಯುತ್ತಿವೆ: ಶಾಸಕ ಎಚ್.ಟಿ.ಮಂಜು ಕಿಡಿ

| Published : May 13 2025, 11:59 PM IST

ಕೆಡಿಪಿ ಸಭೆಗಳು ಕೇವಲ ಕಾಗದದ ಮೇಲೆ ನಡೆಯುತ್ತಿವೆ: ಶಾಸಕ ಎಚ್.ಟಿ.ಮಂಜು ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕನಾಗಿ ಇಂದಿಗೆ ನನಗೆ ಎರಡು ವರ್ಷ ತುಂಬಿದೆ. ಇಲಾಖೆ ಕಾರ್ಯಕ್ರಮಗಳನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋಗಿ ಸಾಮಾನ್ಯ ನಾಗರಿಕನಿಗೂ ಸರ್ಕಾರದ ಸವಲತ್ತು ತಲುಪಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಕೆಡಿಪಿ ಸಭೆಗಳು ಕೇವಲ ಕಾಗದದ ಮೇಲೆ ನಡೆಯುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೆಡಿಪಿ ಸಭೆಗಳು ಕೇವಲ ಕಾಗದದ ಮೇಲೆ ನಡೆಯುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ತಾಲೂಕು ವ್ಯಾಪ್ತಿ ನಿಯಮಾವಳಿಯಂತೆ ಸಕಾಲದಲ್ಲಿ ತಪ್ಪದೆ ಪ್ರಗತಿ ಪರಿಸೀಲನಾ ಸಭೆಗಳನ್ನು ನಡೆಸಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಾಸಕ ಎಚ್.ಟಿ.ಮಂಜು ಸೂಚಿಸಿದರು.

ತಾಲೂಕಿನ ಸಿಂಧಘಟ್ಟ ಗ್ರಾಮ ಪಂಚಾಯ್ತಿ ಆವರಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯನ್ನು ಮಾತನಾಡಿ, ಶಾಸಕನಾಗಿ ಇಂದಿಗೆ ನನಗೆ ಎರಡು ವರ್ಷ ತುಂಬಿದೆ. ಇಲಾಖೆ ಕಾರ್ಯಕ್ರಮಗಳನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋಗಿ ಸಾಮಾನ್ಯ ನಾಗರಿಕನಿಗೂ ಸರ್ಕಾರದ ಸವಲತ್ತು ತಲುಪಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದರು.

ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆಯಾಗಿದೆ. ಗ್ರಾಪಂಗಳು ಆರ್.ಡಿ.ಪಿ.ಐ ಮೂಲಕ ಅಭಿವೃದ್ಧಿ ಕೆಲಸ ಮಾಡಬಹುದು. ಪಂಚಾಯ್ತಿ ಯೋಜನೆಗಳನ್ನು ಜನ ಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋದರೆ ಉತ್ತಮ ಕೆಲಸ ಮಾಡಬಹುದು ಎಂದರು.

ಗ್ರಾಮ ಮಟ್ಟದಲ್ಲಿ ಗ್ರಾಪಂಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ತಾಪಂ, ಜಿಪಂ ಹಾಗೂ ಶಾಸಕರಿಗೆ ಹೊರೆ ಕಡಿಮೆಯಾಗುತ್ತದೆ. ಕೆಡಿಪಿ ಸಭೆ ಮಹತ್ವವನ್ನು ಬಹುತೇಕ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಅರ್ಥ ಮಾಡಿಕೊಂಡಿಲ್ಲ. ಪಿಡಿಒಗಳಿಗೆ ಗೊತ್ತಿದ್ದರೂ ಅವರಿಗೆ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಹಕಾರ ಸಿಗುತ್ತಿಲ್ಲ ಎಂದು ಕಿಡಿಕಾರಿದರು.

ಗ್ರಾಪಂ ಸದಸ್ಯರು ಸರ್ಕಾರದ ಒಂದು ಭಾಗ. ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಗ್ರಾಮ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವ ಅಧಿಕಾರ ಗ್ರಾಪಂ ಅಧ್ಯಕ್ಷರಿಗಿದೆ. ಗ್ರಾಮೀಣ ಜನಕು ನಮ್ಮೂರಿನಲ್ಲಿ ಲೈಟ್ ಇಲ್ಲ. ಚರಂಡಿಯಿಲ್ಲ, ನೀರು ಬರುತ್ತಿಲ್ಲಯ ವಿದ್ಯುತ್ ತಂತಿಗಳು ಜೋತು ಬಿದ್ದಿವೆ ಎಂದು ಶಾಸಕರ ಬಳಿಗೆ ಬರುತ್ತಿದ್ದಾರೆ. ಇದೆಲ್ಲಾ ಗ್ರಾಪಂಗಳು ಮಾಡಬೇಕಾದ ಕೆಲಸ. ಗ್ರಾಪಂ ಅಧ್ಯಕ್ಷರು ತಮಗೆ ಸಿಕ್ಕಿರುವ ಅಧಿಕಾರವನ್ನು ಚಲಾಯಿಸಿ ಸಾರ್ವಜನಿಕರ ಕೆಲಸ ಮಾಡುವಂತೆ ಶಾಸಕರು ಸಲಹೆ ನೀಡಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು ಎಕರೆ ಸರ್ಕಾರಿ ಸ್ಥಳ ಗುರುತಿಸಿ ವಸತಿ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಬೇಕು. ಪೌತಿ ಖಾತೆ ಮಾಡಿಕೊಡಲು ಹಣದ ಆಮಿಷ ಒಡ್ಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಗ್ರಾಮ ಆಡಳಿತಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ತಮ್ಮ ಕಾರ್ಯವೈಕರಿಯನ್ನು ಬದಲಿಸಿಕೊಳ್ಳಬೇಕು ಎಂದು ಎಚ್ಚರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ವಿದ್ಯುತ್ ನೀಡುವಿಕೆ ಸಮರ್ಪಕವಾಗಿಲ್ಲವೆಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿವೆಯ ಶೀಳನೆರೆ ವಿಭಾಗದ ಜೆಇ ಕೂಡಲೇ ಕ್ರಮವಹಿಸದಿದ್ದರೆ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿಂಧಘಟ್ಟ ಪ್ರೌಢಶಾಲೆ ಈ ಬಾರಿ ತೀರಾ ಕಳಪೆ ಫಲಿತಾಂಶವನ್ನು ಪಡೆದಿದೆ. ಸರ್ಕಾರಿ ಶಾಲೆಗಳ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಲಾವಣ್ಯಕುಮಾರ್, ತಾಪಂ ಇಒ ಸುಷ್ಮ, ಪಿಡಿಒ ವಾಣಿ, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್ ಸೇರಿದಂತೆ ಗ್ರಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.