ರೌಡಿಶೀಟರ್, ಸಮಾಜದ ವಿದ್ರೋಹಿಗಳ ಮೇಲೆ ನಿಗಾ ಇರಲಿ: ಮನೋಜಕುಮಾರ್ ಮೀನಾ

| Published : Mar 24 2024, 01:33 AM IST

ಸಾರಾಂಶ

ರಾಜ್ಯದಲ್ಲಿ ಎರಡು ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಕಾನೂನು ಹಾಗೂ ನೀತಿ ಸಂಹಿತೆ ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಬೇಕು

ಬಳ್ಳಾರಿ: ರಾಜ್ಯದಲ್ಲಿ ಎರಡು ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಕಾನೂನು ಹಾಗೂ ನೀತಿ ಸಂಹಿತೆ ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜಕುಮಾರ್ ಮೀನಾ ಎಲ್ಲ ಜಿಲ್ಲಾಧಿಕಾರಿ, ಎಸ್ಪಿಗಳಿಗೆ ಸೂಚನೆ ನೀಡಿದರು.ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಕಚೇರಿಯಿಂದ ಎಲ್ಲ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು.ಈಗಾಗಲೇ ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿದ್ದು, ಚುನಾವಣೆಗೆ ತೊಂದರೆ ಉಂಟು ಮಾಡುವ ಅಥವಾ ಅಹಿತಕರ ಘಟನೆ ಸೃಷ್ಟಿಸುವಂತಹ ರೌಡಿಶೀಟರ್, ಸಮಾಜದ ವಿದ್ರೋಹಿಗಳ ಮೇಲೆ ನಿಗಾ ವಹಿಸಬೇಕು ಎಂದು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆ ಗಡಿಭಾಗ ಹೊಂದಿರುವಂತಹ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣಿನಂತೆ ನಿಗಾ ವಹಿಸಬೇಕು. ಅಕ್ರಮ ಮದ್ಯ, ಅನಧಿಕೃತವಾಗಿ ಸಾಗಿಸುವ ಹಣ, ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಬೇಕು. ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು. ಕೇಂದ್ರದಿಂದ ಭದ್ರತಾ ಪಡೆಗಳ ನಿಯೋಜನೆ ಮಾಡಲಾಗುತ್ತದೆ. ಅವರಿಗೆ ಎಲ್ಲ ತರಹದ ವ್ಯವಸ್ಥೆ ಕೈಗೊಳ್ಳಬೇಕು ಎಂದರು.ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ಸಮರ್ಪಕ ವಿದ್ಯುತ್ ವ್ಯವಸ್ಥೆ ಹಾಗೂ ಮೂಲ ಸೌಲಭ್ಯ ಒದಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಾಹನ ತಪಾಸಣೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘಯಾಗದಂತೆ ನಿಗಾ ವಹಿಸಬೇಕು ಎಂದು ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಯಲು, ಚುನಾವಣಾ ಅಕ್ರಮ ಮತ್ತು ಮತದಾರನನ್ನು ಆಸೆ ಆಮಿಷಗಳಿಗೆ ಒಳಪಡಿಸುವುದನ್ನು ತಡೆಯಲು ನೇರವಾಗಿ ಸಾರ್ವಜನಿಕರು ಫೋಟೋ ಮತ್ತು ವಿಡಿಯೋ ಸೆರೆಹಿಡಿದು ಹಾಕಲು ಕ್ರಮ ಜರುಗಿಸಲು ಚುನಾವಣಾ ಆಯೋಗವು ರೂಪಿಸಿರುವ ಸಿ ವಿಜಿಲ್ ಅಪ್ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಅವರು ಸೂಚಿಸಿದರು.ಸಂವಾದದಲ್ಲಿ ಜಿಲ್ಲಾ ಮಟ್ಟದಿಂದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತಕುಮಾರ್ ಬಂಡಾರು, ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.